ನವದೆಹಲಿ: ನವೆಂಬರ್ 10ರ ದೆಹಲಿ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ, ಫರೀದಾಬಾದ್ ಮೂಲದ ಅಲ್ ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ಮಾತೃಸಂಸ್ಥೆಯಾದ ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ನಡೆಯುತ್ತಿದ್ದ ಭಾರೀ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಹಣಕಾಸು ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ನಕಲಿ ಮಾನ್ಯತೆ ತೋರಿಸಿ ವಿದ್ಯಾರ್ಥಿಗಳಿಗೆ ವಂಚಿಸಿ, ಕೋಟ್ಯಂತರ ರೂಪಾಯಿ ಲಾಭ ಗಳಿಸಿದ ಆರೋಪ ಈ ಸಂಸ್ಥೆಯ ಮೇಲಿದೆ.
415 ಕೋಟಿ ರೂಪಾಯಿ ಅಕ್ರಮ ಆದಾಯ
ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯ ಪ್ರಕಾರ, ಈ ಸಂಸ್ಥೆಯು ಸುಳ್ಳು ದಾಖಲೆಗಳ ಮೂಲಕ ಸುಮಾರು 415 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇ.ಡಿ. ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಅಲ್ ಫಲಾಹ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಖಿಯನ್ನು ಇ.ಡಿ. ಮಂಗಳವಾರ ಬಂಧಿಸಿದೆ. ನ್ಯಾಯಾಲಯವು ಅವರನ್ನು ಡಿಸೆಂಬರ್ 1ರವರೆಗೆ ಅಂದರೆ 13 ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.
ಆರ್ಥಿಕ ಅಕ್ರಮಗಳ ಜಾಲ
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ನಡೆಯುತ್ತಿರುವ ತನಿಖೆಯಲ್ಲಿ, ಸಂಸ್ಥೆಯ ಎಲ್ಲಾ ಬ್ಯಾಂಕ್ ಖಾತೆಗಳು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಒಂದೇ ಪ್ಯಾನ್ ಸಂಖ್ಯೆಯಡಿ ಇರುವುದು ಪತ್ತೆಯಾಗಿದೆ. ಇದು ಸಂಪೂರ್ಣ ಆರ್ಥಿಕ ನಿಯಂತ್ರಣವನ್ನು ಒಂದೇ ಟ್ರಸ್ಟ್‌ನ ಕೈಯಲ್ಲಿ ಇಟ್ಟಿರುವುದನ್ನು ಸೂಚಿಸುತ್ತದೆ.
2014-15ರಿಂದೀಚೆಗಿನ ಐಟಿಆರ್‌ಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಕಿಅಂಶಗಳು ಕಂಡುಬಂದಿವೆ. 2018-19ರಲ್ಲಿ 24.21 ಕೋಟಿ ರೂಪಾಯಿ ಇದ್ದ ಆದಾಯ, 2024-25ರ ವೇಳೆಗೆ 80.01 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಏಳು ವರ್ಷಗಳಲ್ಲಿ ಸಂಸ್ಥೆಯ ಒಟ್ಟು ಆದಾಯ 415 ಕೋಟಿ ರೂಪಾಯಿಗೆ ತಲುಪಿದೆ. ಮಾನ್ಯತೆ ಇಲ್ಲದಿದ್ದರೂ ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕ ವಸೂಲಿ ಮಾಡಲಾಗಿದ್ದು, ಈ ಅಕ್ರಮ ಆದಾಯವನ್ನು ಜವಾದ್ ಸಿದ್ದಿಖಿ ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದಾನೆ ಎಂದು ಇಡಿ ಆರೋಪಿಸಿದೆ.
ದೆಹಲಿ ಸ್ಫೋಟದೊಂದಿಗೆ ನೇರ ಸಂಪರ್ಕ
ನ.10ರಂದು 13 ಜನರ ಸಾವಿಗೆ ಕಾರಣವಾದ ಕೆಂಪುಕೋಟೆ ಬಳಿಯ ಸ್ಫೋಟದ ಹಲವು ಶಂಕಿತ ಉಗ್ರರಿಗೆ ಅಲ್ ಫಲಾಹ್ ವಿಶ್ವವಿದ್ಯಾಲಯವು ಒಂದು ಸಾಮಾನ್ಯ ನೆಲೆಯಾಗಿತ್ತು. ಸ್ಫೋಟದ ರೂವಾರಿ ಡಾ. ಉಮರ್ ಮೊಹಮ್ಮದ್, ಆತನ ಸಹಚರರಾದ ಶಾಹೀನ್ ಸಯೀದ್, ಮುಜಮ್ಮಿಲ್ ಶಕೀಲ್ ಮತ್ತು ಆದಿಲ್ ರಾಥರ್ ಇದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟಕ ತಯಾರಿಸಲು ಬೇಕಾದ ರಾಸಾಯನಿಕಗಳನ್ನು ಇದೇ ವಿವಿಯ ಪ್ರಯೋಗಾಲಯದಿಂದ ಕಳ್ಳಸಾಗಣೆ ಮಾಡಿದ್ದರು ಎಂಬ ಗಂಭೀರ ಆರೋಪವೂ ಅವರ ಮೇಲಿದೆ. ಈ ಮೂಲಕ ಶಿಕ್ಷಣ ಸಂಸ್ಥೆಯೊಂದು ವಂಚನೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿರುವುದು ತನಿಖೆಯಿಂದ ಬಯಲಾಗಿದೆ.
ಇದನ್ನೂ ಓದಿ : ಹಿಡ್ಮಾ ಹತ್ಯೆ ಬೆನ್ನಲ್ಲೇ ಆಂಧ್ರದಲ್ಲಿ ಮತ್ತೊಂದು ಎನ್‌ಕೌಂಟರ್ : 7 ನಕ್ಸಲರ ಹತ್ಯೆ



















