ಒಂದಲ್ಲಾ ಎರಡಲ್ಲಾ 11 ಸಿಕ್ಸರ್. 7 ಬಾರಿ ಚೆಂಡನ್ನು ಬೌಂಡರಿ ಗೆರೆದಾಟಿಸಿದ ವೀರ. ಕೇವಲ. 34 ಎಸೆತಗಳಲ್ಲೇ ಶತಕ ಸಿಡಿಸಿದ ಶರವೇಗದ ಸರದಾರ..ಐಪಿಎಲ್ ನಲ್ಲಿ ನೂತನ ಇತಿಹಾಸ ನಿರ್ಮಿಸಿದ 14ರ ಪೋರ. ಅವತ್ತು ಐಪಿಎಲ್ ಹರಾಜಿನಲ್ಲಿ ಕೇವಲ 14 ವರ್ಷದ ಯುವಕನಿಗೆ ಒಂದು ಕೋಟಿಯ ಬಿಡ್ ಮಾಡಿತ್ತು. ರಾಜಸ್ಥಾನ್ ರಾಯಲ್ಸ್. ಆದರೆ, ಕ್ರಿಕೆಟ್ ಗಣಿತಜ್ಞರು ಅವತ್ತು ರಾಯಲ್ಸ್ ನ ಈ ಲೆಕ್ಕವನ್ನು ಹುಚ್ಚುತನ ಅಂತಲೇ ಲೆಕ್ಕಿಸಿದ್ದರು.
ಹಾಕಿದ ಬಂಡವಾಳಕ್ಕೆ ಮೋಸವಾಗಿಲ್ಲ. ಅಂಗಳದ ತುಂಬೆಲ್ಲಾ ಈ ಪುಟಾಣಿ ಲೀಲಾಜಾಲವಾಗಿ ಚೆಂಡನ್ನು ಅಟ್ಟಾಡಿಸಿದ್ದನ್ನ ಕಂಡ್ರೆ ಎಂಥಾ ದಿಗ್ಗಜ ಕ್ರಿಕೆಟಿಗನು ಈ ಯುವಕನ ಬೆನ್ನು ಚಪ್ಪರಿಸದೆ ಇರಲಾರ…ಯೆಸ್ ಅದು ಬೇರ್ಯಾರೂ ಅಲ್ಲ ಮಿಸ್ಟರ್ ಓನ್ ಅಂಡ್ ಓನ್ಲಿ ವೈಭವ್ ಸೂರ್ಯವಂಶಿ.
ಐಪಿಎಲ್ ಹುಟ್ಟಿದಾಗ ವೈಭವ್ ಇನ್ನೂ ಭೂಮಿಗೇ ಬಂದಿರ್ಲಿಲ್ಲ
ಅದು 2008. ಸಮಸ್ತ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿ ನೋಡಿದಂತಹ ವರ್ಷವದು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕನಸಿನ ಕೂಸು ಐಪಿಎಲ್ ಜನ್ಮಿಸಿತ್ತು. ಸಚಿನ್, ದ್ರಾವಿಡ್, ಗಂಭೀರ್, ಗಂಗೂಲಿಯಂಥ ಅತಿರಥರು ಅವತ್ತು ಐಪಿಎಲ್ ನ ಮುಂಚೂಣಿಯಲ್ಲಿದ್ದರು. ಅಸಲಿಗೆ ಇವತ್ತು ಐಪಿಎಲ್ ಚುಟುಕು ಕ್ರಿಕೆಟ್ ನಲ್ಲಿ ಅಬ್ಬರದ ಸೆಂಚೆರಿ ಸಿಡಿಸಿದ ವೀರ ಅವತ್ತಿನ್ನೂ ಹುಟ್ಟಿರಲೇ ಇಲ್ಲ.

ಹಾಗಂತಾ ಇವತ್ತು ಸಮಸ್ತ ವಿಶ್ವವೇ ಕೊಂಡಾಡುತ್ತಿರುವ ಈ ವೈಭವನ ವೈಭವೋಪೇತ ಆಟದ ಕನಸಿಗೆ ನೀರೆರದಿದ್ದು ಮಾತ್ರ ಕನ್ನಡಿಗ ರಾಹುಲ್ ದ್ರಾವಿಡ್. ರಾಯಲ್ಸ್ ತಂಡದ ಮೆಂಟರ್ ಆಗಿರುವ ರಾಹುಲ್ ಗೆ ವೈಭವನ ಭವಿಷ್ಯದ ವೈಭೋಗದ ಆಟದ ಅರಿವಾಗಿತ್ತು. ಹೀಗಾಗಿಯೇ ಆತನಿಗೆ ಅವಕಾಶ ನೀಡಿ ಇವತ್ತೀಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.
ಜಮೀನು ಮಾರಿ ಮಗನ ಕನಸು ಸಾಕಾರಗೊಳಿಸಿದ ತಂದೆ
ಬಿಹಾರದ ಸಮಸ್ತೀಪುರದ ಪುಟಾಣಿ ವೈಭವ್ ಗಿನ್ನೂ ಕೇವಲ 14 ವರ್ಷ. ಆದರೆ, ಈ 14 ವರ್ಷದ ಕ್ರಿಕೆಟ್ ಲೋಕದ ಪಯಣವೇನು ಮಲ್ಲಿಗೆ ಹೂವಿನ ಹಾಸಾಗಿರಲಿಲ್ಲ..ಬದಲಿಗೆ ಕಷ್ಟದ ಮುಳ್ಳಿನ ದಾರಿಯಲ್ಲಿ ನಡೆದು ಬಂದ ಈ ಯುವಕ ಇವತ್ತು ಸಾಧಿಸಿದ್ದು ಅಲ್ಪವೇ ಆದರೆ ಸಾಧಿಸಬೇಕಿರುವುದು ಅಪಾರ. ಅವತ್ತು ಮಗನ ಕ್ರಿಕೆಟ್ ಕೋಚಿಂಗ್ ಗೆ ಅಂತಾ ತಂದೆ ಇದ್ದ ಜಮೀನು ಮಾರಿ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದರು. ಆದರೀಗ ಆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ವೈಭವ್ ಸೂರ್ಯವಂಶಿ ಇವತ್ತು ಭಾರತ ಕ್ರಿಕೆಟ್ ಜಗತ್ತಿನ ಭರವಸೆಯ ಆಶಾಕಿರಣವಾಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ನೂತನ ಭಾಷ್ಯ ಬರೆದ ಪೋರ
ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಕೀರ್ತಿಯನ್ನೀಗ ವೈಭವ್ ತಮ್ಮ ಪಾಲಾಗಿಸಿಕೊಂಡಿದ್ದಾರೆ. ಈ ಸಾಧನೆಗೆ ಸಮಸ್ತ ಕ್ರಿಕೆಟ್ ಲೋಕದ ದಿಗ್ಗಜರು ಮೆಚ್ಚಿ ಕೊಂಡಾಡಿದ್ದಾರೆ. ಇಂತಹ ಅದ್ಬುತ ಇನ್ನಿಂಗ್ಸ್ ನಾನೆಂದೂ ಕಂಡಿರಲಿಲ್ಲ ಅಂತಾ ಸೂರ್ಯಕುಮಾರ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವೈಭವರಲ್ಲಿ ನಾನು ಸಚಿರನ್ನು ಕಂಡೆ ಅಂತಾ ನಿತೀಶ್ ರೆಡ್ಡಿ ಕೊಂಡಾದಿದ್ದಾರೆ. ಇನ್ನು ನಟ ವಿವೇಕ್ ಓಬೇರಾಯ್, ಸಾಧನೆಯ ಹಾದಿಯಲ್ಲಿ ವಯಸ್ಸೆನ್ನೋದು ಕೇವಲ ಸಂಖ್ಯೆಯಷ್ಟೇ ಎಂದಿದ್ದಾರೆ.
ಹೊಸ ಸೂಪರ್ ಸ್ಟಾರ್ ನ ಉದಯವಾಗಿದೆ ಅಂತಾ ಹರ್ಭಜನ್ ಹೊಗಳಿದ್ದಾರೆ. ವೈಭವ್ ನೀನೆಂಥಾ ಅಪ್ರತಿಮ ಆಟಗಾರ ಅಂತಾ ಮೊಹಮದ್ ಶಮಿ ಕೊಂಡಾಡಿದ್ದಾರೆ. ಒಟ್ನಲ್ಲಿ ಕೇವಲ 14ರ ಪ್ರಾಯಕ್ಕೆ ವೈಭವ್ ಸಾಗುತ್ತಿರೋ ಹಾದಿ ಅಮೋಘ. ಆದ್ರೆ ಇದು ಇಲ್ಲಿಗೆ ನಿಲ್ಲಬಾರ್ದು, ಮುಂದೊಂದು ದಿನ ಭಾರತದ ವೈಭವವನ್ನು ಈ ಸೂರ್ಯವಂಶಿ ಮತ್ತಷ್ಟು ಹೆಮ್ಮಪಡುವ ಮಟ್ಟಕ್ಕೆ ಕೊಂಡೋಯ್ಯೋ ಸಾಧಕನಾಗಲಿ ಅನ್ನೋದು ಎಲ್ಲರ ಹೆಬ್ಬಯಕೆ.