ನವದೆಹಲಿ: ದೆಹಲಿಯ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಅತಿಶಿ ಅವರು ಕೇಜ್ರಿವಾಲ್ ರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ಗುರಿ ಎಂದು ಹೇಳಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೇ ನನ್ನ ಗುರಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸುತ್ತಿದೆ. ಕೇಂದ್ರ ಬಿಜೆಪಿ ಕೇಜ್ರಿವಾಲ್ ರನ್ನು 6 ತಿಂಗಳು ಜೈಲಿನಲ್ಲಿ ಇರಿಸಿತು. ಕೇಜ್ರಿವಾಲ್ ರನ್ನು ಕಂಡರೆ ಬಿಜೆಪಿಗೆ ಭಯ. ಹೀಗಾಗಿ ಅವರನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ಡನೆಸಿದ್ದಾರೆ.
ಮುಂದಿನ ವರ್ಷದ ಚುನಾವಣೆಯವರೆಗೆ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ. ಮತ್ತೆ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಅರವಿಂದ್ ಕೇಜ್ರಿವಾಲ್ ಅವರೇ ಸಿಎಂ ಆಗುತ್ತಾರೆ. ಹೀಗಾಗಿ ಮತ್ತೊಮ್ಮೆ ಕೇಜ್ರಿವಾಲ್ ರನ್ನು ಅಧಿಕಾರಕ್ಕೆ ತರಲು ನಾವೆಲ್ಲ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಬಡವರಿಗೆ ವಿದ್ಯುತ್ ನೀಡಿದ್ದಾರೆ. ಬಡವರ ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜೆಪಿಯವರು ನಿಲ್ಲಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಈಗ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದಿದ್ದಾರೆ ಎಂದು ಹೇಳಿದ್ದಾರೆ. ಅತಿಶಿ ದೆಹಲಿಯ ಮೂರನೇ ಮಹಿಳಾ ಸಿಎಂ ಹಾಗೂ ಭಾರತದ 17ನೇ ಮಹಿಳಾ ಮುಖ್ಯಮಂತ್ರಿ ಆಗಿದ್ದಾರೆ.