ಬೆಂಗಳೂರು : ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆ ಉಗ್ರ ಟೀ ನಸೀರ್‌ಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಮೂವರು ಹೊಸ ಆರೋಪಿಗಳ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದ ಎನ್‌ಐಎ, ಇದೀಗ ಹೆಚ್ಚುವರಿಯಾಗಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸಿದೆ.
ಎನ್‌ಐಎ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಸಿಎಆರ್ ಎಎಸ್‌ಐ ಚಾಂದ್ ಪಾಷಾ, ಅನಿಸಾ ಫಾತಿಮಾ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮನೋ ವೈದ್ಯರಾಗಿದ್ದ ಡಾ. ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ಮೂವರು ಆರೋಪಿಗಳು ಉಗ್ರ ಟೀ ನಸೀರ್‌ಗೆ ಜೈಲಿನೊಳಗಿಂದಲೇ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಎನ್‌ಐಎ ಪರಾರಿಯಾಗಿದ್ದ ಜುನೈದ್ ಸೇರಿ ಒಟ್ಟು 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ತನಿಖೆ ಮತ್ತಷ್ಟು ವಿಸ್ತಾರಗೊಂಡಿದ್ದು, ಹೆಚ್ಚುವರಿ ಆರೋಪಿಗಳನ್ನು ಒಳಗೊಂಡಂತೆ ಹೊಸ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಹಣಕಾಸಿನ ನೆರವು ನೀಡಿದ್ದ ಅನಿಸಾ ಫಾತಿಮಾ
ಅನಿಸಾ ಫಾತಿಮಾ ಜುನೈದ್ ಅಹಮದ್ ಅವರ ತಾಯಿಯಾಗಿದ್ದು, ಮಗನ ಸೂಚನೆಯಂತೆ ಉಗ್ರ ಟೀ ನಸೀರ್‌ಗೆ ಹಣಕಾಸಿನ ನೆರವು ಒದಗಿಸುತ್ತಿದ್ದಳು ಎಂಬ ಆರೋಪ ಇದೆ. ಅಲ್ಲದೆ, ಹ್ಯಾಂಡ್ ಗ್ರೈನೇಡ್, ವಾಕಿಟಾಕಿ ಸೇರಿದಂತೆ ಅಪಾಯಕಾರಿ ಸಾಧನಗಳ ನಿರ್ವಹಣೆ, ಆರೋಪಿಗಳ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ ಆರೋಪವೂ ಆಕೆಯ ಮೇಲೆ ಹೊರಿಸಲಾಗಿದೆ. ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ಸಹ ಅನಿಸಾ ಫಾತಿಮಾ ನೆರವು ನೀಡಿದ್ದಾಳೆ ಎಂದು ಎನ್‌ಐಎ ಆರೋಪಿಸಿದೆ.
ಇನ್ನೊಂದು ಪ್ರಮುಖ ಆರೋಪಿ ಚಾಂದ್ ಪಾಷಾ, ಸಿಎಆರ್ (ಸಿಟಿ ಆರ್ಮ್ಡ್ ರಿಸರ್ವ್) ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದನು. ಹಣದ ಆಸೆಗೆ ಶಂಕಿತ ಉಗ್ರರ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಆತನ ವಿರುದ್ಧ ಇದೆ. ಉಗ್ರ ಟೀ ನಸೀರ್‌ನ ಮಾಹಿತಿ ಹಾಗೂ ಜೈಲಿನಿಂದ ಸಾಗಿಸುವ ವೇಳೆ ಬೆಂಗಾವಲು ಪಡೆಯ ವಿವರಗಳನ್ನು ಸಲ್ಮಾನ್ ಖಾನ್‌ಗೆ ರವಾನಿಸುತ್ತಿದ್ದನು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಕೈ ಕಾರ್ಯಕರ್ತನ ಸಾವಿಗೆ ಭರತ್ ರೆಡ್ಡಿ ಕಾರಣ, ಕೂಡಲೇ ಬಂಧಿಸಿ | ಆರ್.ಅಶೋಕ್


















