ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮುಂಬೈನ ದಲ್ಲಾಲ್ ಸ್ಟ್ರೀಟ್ ನಲ್ಲಿ ಕದನ ವಿರಾಮ ಘೋಷಣೆ ಹೂಡಿಕೆದಾರರಿಗೆ ಅತ್ಯುತ್ಸಾಹ ನೀಡಿದೆ.
ವಾರದ ಮೊದಲ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 1666 ಅಂಕಗಳ ಏರಿಕೆಯೊಂದಿಗೆ ದಾಖಲೆಯ 81 ಸಾವಿರದ 620 ಅಂಕಗಳ ವಹಿವಾಟಿಗೆ ಸಾಕ್ಷಿಯಾಯಿತು. ನಿಫ್ಟಿ ಕೂಡ ಉತ್ತಮ ಆರಂಭವನ್ನೇ ಕಂಡಿದ್ದು, 24,684 ಅಂಕಗಳ ವಹಿವಾಟು ದಾಖಲಿಸಿದೆ. ಈ ಮೂಲಕ ಷೇರುಪೇಟೆಯಲ್ಲಿಂದು ಗೂಳಿ ಆರ್ಭಟಿಸಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಮೈಕ್ರೋ ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಷೇರುಗಳು ಉತ್ತಮ ಬೆಲೆಯನ್ನು ದಾಖಲಿಸಿವೆ. ಅಸಲಿಗೆ ಇಂದಿನ ಈ ಏರುಗತಿಯ ವಹಿವಾಟಿಗೆ ಯುದ್ಧದ ಕಾರ್ಮೋಡ ಕರಗಿದ್ದೇ ಪ್ರಮುಖ ವಿಚಾರವಾಗಿತ್ತು. ಇದರೊಟ್ಟಿಗೆ, ಚೀನಾ-ಅಮೆರಿಕ ವ್ಯಾಪಾರ ಒಪ್ಪಂದ ಮರು ಪರೀಶನೆಯಲ್ಲಿರುವುದೇ ಮೂಲ ಕಾರಣ ಎನ್ನಲಾಗುತ್ತಿದೆ.