ಹೈದರಾಬಾದ್: ಮದುವೆ ಮಾತುಕತೆಗೆಂದು ಕರೆಸಿ, ಪ್ರಿಯತಮೆಯ ಪೋಷಕರೇ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆಗೈದ ಆಘಾತಕಾರಿ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ಜ್ಯೋತಿ ಶ್ರವಣ್ ಸಾಯಿ ಎಂದು ಗುರುತಿಸಲಾಗಿದೆ. ಈತ ಮೈಸಮ್ಮಗುಡದ ಸೇಂಟ್ ಪೀಟರ್ಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ (ಸಿಎಸ್‌ಇ) ವಿದ್ಯಾರ್ಥಿಯಾಗಿದ್ದ. ವಿದ್ಯಾಭ್ಯಾಸಕ್ಕಾಗಿ ಈತ ಕುತ್ಬುಲ್ಲಾಪುರದಲ್ಲಿ ಬಾಡಿಗೆ ಕೋಣೆಯಲ್ಲಿ ವಾಸವಿದ್ದ.
ಅಮೀನ್‌ಪುರ ಸರ್ಕಲ್ ಇನ್ಸ್‌ಪೆಕ್ಟರ್ ನರೇಶ್ ಅವರು ನೀಡಿದ ಮಾಹಿತಿಯ ಪ್ರಕಾರ, ಶ್ರವಣ್ ಸಾಯಿ ಬೀರಂಗುಡದ ಇಸುಕಬಾವಿ ನಿವಾಸಿಯಾದ 19 ವರ್ಷದ ಶ್ರೀಜಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ, ಇವರಿಬ್ಬರ ಸಂಬಂಧಕ್ಕೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿಂದೆಯೂ ಶ್ರೀಜಾಳ ಕುಟುಂಬದವರು ಶ್ರವಣ್ ಸಾಯಿಗೆ ಯುವತಿಯಿಂದ ದೂರವಿರುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ನಡೆದಿದ್ದೇನು?
ಘಟನೆ ನಡೆದ ದಿನದಂದು, ಮದುವೆಯ ವಿಷಯವಾಗಿ ಚರ್ಚಿಸೋಣ ಎಂದು ನಂಬಿಸಿ ಯುವತಿಯ ಪೋಷಕರು ಶ್ರವಣ್ ಸಾಯಿಯನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಶ್ರವಣ್ ಮನೆಗೆ ಬಂದ ಕೂಡಲೇ ಯುವತಿಯ ತಾಯಿ ಸೇರಿದಂತೆ ಕುಟುಂಬಸ್ಥರು ಏಕಾಏಕಿ ಆತನ ಮೇಲೆ ಮುಗಿಬಿದ್ದಿದ್ದಾರೆ. ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ್ದಾರೆ. ಈ ಹಲ್ಲೆಯಲ್ಲಿ ಶ್ರವಣ್ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕಾಲು ಮತ್ತು ಪಕ್ಕೆಲುಬು ಮುರಿತಕ್ಕೊಳಗಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ರವಣ್‌ನನ್ನು ಕೂಡಲೇ ಕುಕಟ್‌ಪಲ್ಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಅಮೀನ್‌ಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಲಾದ ಕ್ರಿಕೆಟ್ ಬ್ಯಾಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನಾ ಸ್ಥಳದ ದೃಶ್ಯಗಳನ್ನು ದಾಖಲಿಸಿಕೊಳ್ಳಲಾಗಿದೆ. ಹಲ್ಲೆಯಲ್ಲಿ ಕುಟುಂಬದ ಇತರ ಸದಸ್ಯರ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ ಬಳಿ ಭೀಕರ ಕಾರು ಅಪಘಾತ | ಮೂವರು ಸ್ಥಳದಲ್ಲೇ ಸಾವು



















