ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ನಾಳೆ(ಗುರುವಾರ) ನಿತೀಶ್ ಕುಮಾರ್ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಭವ್ಯ ಸಮಾರಂಭದಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ 22 ಸಚಿವರು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಆಡಳಿತಾರೂಢ ಮೈತ್ರಿಕೂಟದ ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಹೊಸ ಸಂಪುಟದಲ್ಲಿ ಬಿಜೆಪಿಯಿಂದ 9 ಶಾಸಕರು, ಜೆಡಿಯುನಿಂದ 10 ಶಾಸಕರು, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್ ವಿಲಾಸ್), ಜೀತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾದಿಂದ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಸಚಿವಾಕಾಂಕ್ಷಿಗಳ ಪಟ್ಟಿ ಮತ್ತು ಜಾತಿ ಲೆಕ್ಕಾಚಾರ
ಬಿಜೆಪಿ ಮತ್ತು ಜೆಡಿಯು ಎರಡೂ ಪಕ್ಷಗಳು ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಜಾತಿ ಸಮೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸಿವೆ.
ಬಿಜೆಪಿ ಕೋಟಾ: ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ, ನಿತಿನ್ ನವೀನ್, ರೇಣು ದೇವಿ, ಮಂಗಲ್ ಪಾಂಡೆ, ನೀರಜ್ ಬಬ್ಲು, ಸಂಜಯ್ ಸರವಾಗಿ, ಹರಿ ಸಹಾನಿ ಮತ್ತು ರಜನೀಶ್ ಕುಮಾರ್ ಅವರು ಸಚಿವರಾಗುವ ಸಾಧ್ಯತೆಯಿದೆ. ಇವರಲ್ಲಿ 8 ಮಂದಿ ಹಿಂದಿನ ಸರ್ಕಾರದಲ್ಲೂ ಸಚಿವರಾಗಿದ್ದರು. ಬಿಜೆಪಿ ಇಬ್ಬರು ಭೂಮಿಹಾರ್, ಇಬ್ಬರು ಅತ್ಯಂತ ಹಿಂದುಳಿದ ವರ್ಗ (EBC), ಹಾಗೂ ಬ್ರಾಹ್ಮಣ, ರಜಪೂತ, ಕಾಯಸ್ಥ ಮತ್ತು ವೈಶ್ಯ ಸಮುದಾಯಗಳಿಗೆ ತಲಾ ಒಂದೊಂದು ಸ್ಥಾನ ನೀಡುವ ಮೂಲಕ ಸಾಮಾಜಿಕ ಸಮತೋಲನ ಕಾಯ್ದುಕೊಂಡಿದೆ.
ಜೆಡಿಯು ಕೋಟಾ: ವಿಜಯ್ ಚೌಧರಿ, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಜಮಾ ಖಾನ್, ರತ್ನೇಶ್ ಸದಾ, ಲೇಶಿ ಸಿಂಗ್, ಬಿಜೇಂದರ್ ಯಾದವ್, ಶ್ಯಾಮ್ ರಜಕ್, ಸುನೀಲ್ ಕುಮಾರ್ ಮತ್ತು ದಾಮೋದರ್ ರಾವತ್ ಅವರು ಸಚಿವರಾಗುವ ನಿರೀಕ್ಷೆಯಿದೆ. ಜೆಡಿಯು ಕೂಡ ನಾಲ್ವರು ದಲಿತರಿಗೆ ಹಾಗೂ ಮುಸ್ಲಿಂ, ಯಾದವ, ಇಬಿಸಿ, ರಜಪೂತ ಮತ್ತು ಭೂಮಿಹಾರ್ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದೆ.
ಮಿತ್ರಪಕ್ಷಗಳಿಗೂ ಮಣೆ
ಇನ್ನುಳಿದಂತೆ, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷದಿಂದ ರಾಜು ತಿವಾರಿ, ಜೀತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಸುಮನ್ ಮತ್ತು ಉಪೇಂದ್ರ ಕುಶ್ವಾಹ ಅವರ ಪತ್ನಿ ಸ್ನೇಹಲತಾ ಕುಶ್ವಾಹ ಅವರು ಕೂಡ ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಕೂಟ 202 ಸ್ಥಾನಗಳನ್ನು ಗೆದ್ದುಕೊಂಡಿದೆ. ನಾಳಿನ ಪ್ರಮಾಣ ವಚನ ಸಮಾರಂಭವನ್ನು ಎನ್‌ಡಿಎಯ ಶಕ್ತಿ ಪ್ರದರ್ಶನವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ಅಲ್ ಫಲಾಹ್ ವಿವಿ ಕರಾಳ ಮುಖ : ನಕಲಿ ಮಾನ್ಯತೆ, ಕೋಟ್ಯಂತರ ವಂಚನೆ, ಉಗ್ರರ ನಂಟು ಬಯಲು!



















