ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಮಳೆ ಕೈ ಹಿಡಿದಿದೆ.
ಭಾರತದ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಸಿ ಆಲೌಟ್ ಆಗಿದೆ. ಈ ಗುರಿ ಬೆನ್ನಟ್ಟಿದ ಭಾರತ ಮತ್ತೊಮ್ಮೆ ಆರಂಭಿಕ ಕುಸಿತ ಕಂಡಿದೆ. ಭಾರತೀಯ ಸ್ಟಾರ್ ಆಟಗಾರರು ಪೆವಲಿಯನ್ ಪರೇಡ್ ನಡೆಸಿದ್ದಾರೆ. ಸೋಲುವ ಭೀತಿಯಲ್ಲಿರುವ ಭಾರತಕ್ಕೆ ಈಗ ಮಳೆ ಆಸರೆಯಾಗಿದೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಮಿಚೆಲ್ ಸ್ಟಾರ್ಕ್ ದೊಡ್ಡ ಆಘಾತ ನೀಡಿದರು.. ಆಸ್ಟ್ರೇಲಿಯಾ ಬೌಲರ್ ದಾಳಿಗೆ ನಡುಗಿದ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ 51 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರನ್ ಮಷಿನ್ ಕಿಂಗ್ ಕೊಹ್ಲಿ 3 ರನ್ ಗೆ ಸುಸ್ತಾದರು. ಹೀಗಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕೊಹ್ಲಿ ಉತ್ತಮ ರನ್ ಗಳಿಸಲು ವಿಫಲವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವರಂತೂ ರಿಟೈರ್ ತಗೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಧ್ಯಮ ಕ್ರಮಾಂಕದ ಆಟಗಾರರು ಕೈ ಹಿಡಿದರು. ಆರಂಭಿಕರಾದ (18), ನಾಥನ್ ಲಿಯಾನ್ (2) ಹಾಗೂ ಅಲೆಕ್ಸ್ ಕ್ಯಾರಿ (70)ಯ ವಿಕೆಟ್ ಕಳೆದುಕೊಂಡಿತು. ನಂತರ ಟ್ರಾವಿಸ್ ಹೆಡ್ ಹಾಗೂ ಸ್ವೀವನ್ ಸ್ಮಿತ್ ಶತಕ ಸಿಡಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡ 445 ರನ್ ಗಳಿಗೆ ಇನ್ನಿಂಗ್ಸ್ ಕೊನೆಗೊಳಿಸಿತು.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸ್ಟಾರ್ಕ್ ಆಘಾತ ನೀಡಿದರು. ಮೊದಲ ಓವರ್ ನ 2ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ (4) ವಿಕೆಟ್ ಉರುಳಿಸಿದರು. ನಂತರ ಕಣಕ್ಕಿಳಿದ ಶುಭ್ಮನ್ ಗಿಲ್ ಕೂಡ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 3 ರನ್ ಗೆ ಕ್ಯಾಚ್ ನೀಡಿದರು. ಬಳಿಕ ಬಂದ ರಿಷಬ್ ಪಂತ್ 9 ರನ್‌ಗೆ ಬಂದ ದಾರಿಯಲ್ಲೇ ಹಿಂದಿರುಗಿದರು. ಈ ವೇಳೆ ಮಳೆ ಸುರಿಯಲಾರಂಭಿಸಿತು. ಆದಾಗ್ಯೂ ಉತ್ತಮ ದಾಳಿ ಸಂಘಟಿಸಿದ ಆಸ್ಟ್ರೇಲಿಯಾ ಬೌಲರ್ ಗಳು 17 ಓವರ್ ಗಳಲ್ಲಿ 51 ರನ್ ನೀಡಿ 4 ವಿಕೆಟ್ ಕಬಳಿಸಿದರು. 18ನೇ ಓವರ್ ಆರಂಭಕ್ಕೂ ಮುನ್ನ ಮತ್ತೆ ಮಳೆ ಬರಲಾರಂಭಿಸಿದ್ದರಿಂದ ಅಂಪೈರ್ ದಿನದಾಟವನ್ನು ಅಂತ್ಯಗೊಳಿಸಲು ನಿರ್ಧರಿಸಿದರು.
ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದೆ. ಕೆ.ಎಲ್. ರಾಹುಲ್ (33) ಹಾಗೂ ರೋಹಿತ್ ಶರ್ಮಾ ಯಾವುದೇ ರನ್ ಗಳಿಸದೆ ಕ್ರೀಸ್ ನಲ್ಲಿದ್ದಾರೆ.