ನವದೆಹಲಿ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಐಕಾನಿಕ್ ಸ್ಥಾನಮಾನ ಹೊಂದಿದ್ದ ಟಾಟಾ ಸಿಯೆರಾ ಭರ್ಜರಿ ಪುನರಾಗಮನ ಮಾಡಿದ್ದು, ಬುಕಿಂಗ್ ಆರಂಭವಾದ ಮೊದಲ ದಿನವೇ ದಾಖಲೆ ಬರೆದಿದೆ. ಮಿಡ್-ಸೈಜ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಿರುವ ಈ ಬಹುನಿರೀಕ್ಷಿತ ಕಾರು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 70,000ಕ್ಕೂ ಹೆಚ್ಚು ದೃಢೀಕೃತ ಬುಕಿಂಗ್‌ಗಳನ್ನು ಪಡೆದುಕೊಳ್ಳುವ ಮೂಲಕ ಗ್ರಾಹಕರ ಮನ ಗೆದ್ದಿದೆ.
ಇನ್ನೂ 1.35 ಲಕ್ಷಕ್ಕೂ ಹೆಚ್ಚು ಗ್ರಾಹಕರು ತಮ್ಮ ನೆಚ್ಚಿನ ಮಾದರಿಗಳನ್ನು ಆಯ್ಕೆ ಮಾಡಿ ಬುಕಿಂಗ್ ಪ್ರಕ್ರಿಯೆಯ ಅಂತಿಮ ಹಂತದಲ್ಲಿದ್ದಾರೆ ಎಂದು ಟಾಟಾ ಮೋಟರ್ಸ್ ಪ್ರಕಟಿಸಿದೆ. ಈ ಅಭೂತಪೂರ್ವ ಪ್ರತಿಕ್ರಿಯೆಯು ಸಿಯೆರಾ ಬ್ರಾಂಡ್ ಮೇಲಿನ ಭಾರತೀಯರ ನಂಬಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಹೊಸ ಸಿಯೆರಾ ತನ್ನ ಮೂಲ ಬಾಕ್ಸಿ ವಿನ್ಯಾಸವನ್ನು ಉಳಿಸಿಕೊಂಡರೂ, ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಾರಿನ ಮುಂಭಾಗದಲ್ಲಿ ಭಾರತದ ಅತ್ಯಂತ ಸ್ಲಿಮ್ ಆದ 17 ಎಂಎಂ ಬೈ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಪನೋರಾಮಿಕ್ ಸನ್‌ರೂಫ್ ಮತ್ತು 19 ಇಂಚಿನ ಅಲಾಯ್ ವೀಲ್‌ಗಳು ಕಾರಿಗೆ ಐಷಾರಾಮಿ ಲುಕ್ ನೀಡಿವೆ. ವಿಶೇಷವಾಗಿ ಕಾರಿನ ಹಿಂಬದಿಯ ವಿನ್ಯಾಸ ಮತ್ತು ಅಲ್ಲಿನ ವಿಶಾಲವಾದ ಗ್ಲಾಸ್ ಏರಿಯಾ ಹಳೆಯ ಸಿಯೆರಾದ ನೆನಪನ್ನು ಮರುಕಳಿಸುವಂತೆ ಮಾಡಿದೆ. ಈ ವಿಶಿಷ್ಟ ವಿನ್ಯಾಸಕ್ಕಾಗಿ ಪ್ರತಿಷ್ಠಿತ ರೆಡ್ ಡಾಟ್ ಡಿಸೈನ್ ಪ್ರಶಸ್ತಿಯೂ ಈ ಕಾರಿಗೆ ಒಲಿದಿದೆ.

ಲಿವಿಂಗ್ ರೂಮ್ ಪರಿಕಲ್ಪನೆ
ಕಾರಿನ ಒಳಾಂಗಣವನ್ನು ಅತ್ಯಂತ ಆರಾಮದಾಯಕವಾಗಿರುವಂತೆ ‘ಲಿವಿಂಗ್ ರೂಮ್’ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ 12.3 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ಪ್ರಯಾಣಿಕರಿಗಾಗಿ ಪ್ರತ್ಯೇಕ 12.3 ಇಂಚಿನ ಸ್ಕ್ರೀನ್ ಮತ್ತು ಚಾಲಕನಿಗಾಗಿ ಡಿಜಿಟಲ್ ಕ್ಲಸ್ಟರ್ ಒಳಗೊಂಡ ‘ಥಿಯೇಟರ್ ಪ್ರೊ’ ಟ್ರಿಪಲ್ ಸ್ಕ್ರೀನ್ ಸೆಟಪ್ ಅಳವಡಿಸಲಾಗಿದೆ. ಇದರೊಂದಿಗೆ ವೆಂಟಿಲೇಟೆಡ್ ಸೀಟುಗಳು, ಜೆಬಿಎಲ್ 12-ಸ್ಪೀಕರ್ ಆಡಿಯೋ ಸಿಸ್ಟಮ್ ಮತ್ತು ಟಾಟಾ ಕಾರುಗಳಲ್ಲೇ ಮೊದಲ ಬಾರಿಗೆ ಹೆಡ್-ಅಪ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಲೆವೆಲ್-2 ಎಡಿಎಎಸ್ ತಂತ್ರಜ್ಞಾನ ಮತ್ತು 6 ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ.

ಎಂಜಿನ್ ವಿಭಾಗದಲ್ಲೂ ಸಿಯೆರಾ ಬಲಿಷ್ಠವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಶಕ್ತಿಶಾಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಆಲ್-ವೀಲ್ ಡ್ರೈವ್ ಮಾದರಿಯನ್ನೂ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವಾತ್ಸವ, ಗ್ರಾಹಕರ ಈ ಅದ್ಭುತ ಪ್ರತಿಕ್ರಿಯೆಯು ಸಿಯೆರಾ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವ್ಯಾಗನ್‌ಆರ್ ಕಾರಿನಲ್ಲಿ ಇನ್ನು ಹಿರಿಯರ ಪ್ರಯಾಣ ಸುಲಭ : ಮಾರುತಿ ಸುಜುಕಿಯಿಂದ ಸ್ವಿವೆಲ್ ಸೀಟ್ ಬಿಡುಗಡೆ!



















