ಬೆಳಗಾವಿ: ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೇ, ಘಟನೆಯಲ್ಲಿ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಮಗ ಮಹೇಶ್ ರಾಮಚಂದ್ರ ಜಾಧವ್ (18), ರಾಮಣ್ಣ ಅಲಿಯಾಸ್ ರಮೇಶ್ (38) ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಮೃತ ರಾಮಚಂದ್ರ ಪತ್ನಿ ಲಕ್ಷ್ಮೀಬಾಯಿ, ಅನುಶ್ರೀ, ಮೃತ ರಾಮಣ್ಣನ ಪತ್ನಿ ಭೀಮವ್ವ (55) ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಭೀಮವ್ವ ಅವರ ಎರಡೂ ಕಾಲುಗಳು ಕಟ್ ಆಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕರು ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರು ಮಂದಿ ಕಾರ್ಮಿಕರ ಮೇಲೆ ಆಯಿಲ್ ತುಂಬಿದ್ದ ಟ್ಯಾಂಕರ್ ಏಕಾಏಕಿ ಹರಿದು ನಂತರ ಪಲ್ಟಿಯಾಗಿದೆ. ಟ್ಯಾಂಕರ್ನಲ್ಲಿ ಸಿಲುಕಿದ್ದ ಚಾಲಕನನ್ನು ಪೊಲೀಸರು ಹೊರ ತೆಗೆದಿದ್ದಾರೆ. ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.