ನವದೆಹಲಿ: ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021ರ ಅಡಿಯಲ್ಲಿ ವಿಧಿಸಲಾದ ವಯಸ್ಸಿನ ನಿರ್ಬಂಧಗಳು, ಕಾಯ್ದೆ ಜಾರಿಗೆ ಬರುವ ಮುನ್ನವೇ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಪ್ರಾರಂಭಿಸಿದ ದಂಪತಿಗೆ ಪೂರ್ವಾನ್ವಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಕಾಯ್ದೆ ಜಾರಿಗೆ ಬರುವ ಮುನ್ನ ಭ್ರೂಣಗಳನ್ನು ಸಂರಕ್ಷಿಸಿದ್ದ ದಂಪತಿಗೂ ಈ ತೀರ್ಪು ಅನ್ವಯಿಸುತ್ತದೆ ಎಂದೂ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, “ಬಾಡಿಗೆ ತಾಯ್ತನವನ್ನು ಪಡೆಯಲು ಇಚ್ಛಿಸುವ ಪೋಷಕರ ಹಕ್ಕುಗಳು, ಅವರು ಭ್ರೂಣಗಳನ್ನು ಸಂರಕ್ಷಿಸಿದ ಸಮಯದಲ್ಲಿದ್ದ ಕಾನೂನಿನ ಚೌಕಟ್ಟಿನಡಿಯಲ್ಲಿ ಸ್ಥಿರೀಕರಣಗೊಂಡಿರುತ್ತವೆ. ಆ ಸಮಯದಲ್ಲಿ ಯಾವುದೇ ವಯಸ್ಸಿನ ನಿರ್ಬಂಧಗಳು ಇರಲಿಲ್ಲ. ಹಾಗಾಗಿ 2021 ಕ್ಕಿಂತ ಮೊದಲು, ಬಾಡಿಗೆ ತಾಯ್ತನವನ್ನು ಬಯಸುವ ದಂಪತಿಗೆ ವಯಸ್ಸಿನ ನಿರ್ಬಂಧಗಳ ಬಗ್ಗೆ ಯಾವುದೇ ಕಾನೂನುಗಳು ಇರಲಿಲ್ಲ. ಹೀಗಾಗಿ ಇದು ಅವರಿಗೆ ಅನ್ವಯ ಆಗದು” ಎಂದಿದೆ.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021, ಜನವರಿ 25, 2022 ರಂದು ಜಾರಿಗೆ ಬಂದಿತು. ಈ ಕಾಯ್ದೆಯು ಮಹಿಳೆಗೆ 23 ರಿಂದ 50 ವರ್ಷ ಮತ್ತು ಪುರುಷನಿಗೆ 26 ರಿಂದ 55 ವರ್ಷಗಳ ಕಟ್ಟುನಿಟ್ಟಾದ ವಯಸ್ಸಿನ ಮಿತಿಯನ್ನು ವಿಧಿಸುತ್ತದೆ. ಈ ಕಾನೂನು ಜಾರಿಗೆ ಬರುವ ಮೊದಲು ಭ್ರೂಣಗಳನ್ನು ಸಂರಕ್ಷಿಸಿದ್ದ ಹಲವಾರು ದಂಪತಿಗಳು, ಈ ಷರತ್ತನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನು ಪೂರ್ವಾನ್ವಯಗೊಳಿಸುವುದು ತಮ್ಮ ಸಂತಾನೋತ್ಪತ್ತಿ ಸ್ವಾಯತ್ತತೆ ಮತ್ತು ಪಿತೃತ್ವದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು.
“ಸರ್ಕಾರದ ವಾದ”
ಕೇಂದ್ರ ಸರ್ಕಾರವು, “ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಕ್ಕಳ ಕಲ್ಯಾಣಕ್ಕಾಗಿ ವಯಸ್ಸಿನ ಮಿತಿಗಳನ್ನು ಹಾಕಲಾಗಿದೆ. ವಯಸ್ಸಾದ ಪೋಷಕರು ಮಗುವಿನ ದೀರ್ಘಕಾಲೀನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಿರಬಹುದು” ಎಂದು ವಾದಿಸಿತ್ತು. ಆದಾಗ್ಯೂ, ಪೀಠವು ಈ ತಾರ್ಕಿಕತೆಯನ್ನು ಒಪ್ಪಿಕೊಂಡಿಲ್ಲ. “ನೈಸರ್ಗಿಕವಾಗಿ ಗರ್ಭಧರಿಸುವ ದಂಪತಿಗೆ ಇದೇ ರೀತಿಯ ಕಾಳಜಿಯನ್ನು ಅನ್ವಯಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. “ಪೋಷಕರಾಗುವ ಹಕ್ಕು ವೈಯಕ್ತಿಕ ಸ್ವಾಯತ್ತತೆಯ ವಿಷಯವಾಗಿದೆ ಮತ್ತು ಹೊಸ ನಿರ್ಬಂಧಗಳನ್ನು ಪೂರ್ವಾನ್ವಯಿಸುವ ಮೂಲಕ ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ನಾಗರತ್ನಾ ಸ್ಪಷ್ಟಪಡಿಸಿದ್ದಾರೆ.