ವಾಷಿಂಗ್ಟನ್: ಬಾಹ್ಯಾಕಾಶದಿಂದ ಭಾರತವು ಹೇಗೆ ಕಾಣಿಸುತ್ತದೆ? 4 ದಶಕಗಳ ಹಿಂದೆ ಇದೇ ಪ್ರಶ್ನೆಯನ್ನು ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾರನ್ನು ಕೇಳಿದಾಗ ಅವರು, ಕವಿ ಮೊಹಮ್ಮದ್ ಇಕ್ಬಾಲ್ ಅವರ “ಸಾರೇ ಜಹಾನ್ ಸೇ ಅಚ್ಛಾ” ಹಾಡನ್ನು ಹಾಡುವ ಮೂಲಕ ತಮ್ಮ ಮನದ ಮಾತುಗಳನ್ನು ತಿಳಿಸಿದ್ದರು. ಈಗ ಅದೇ ಪ್ರಶ್ನೆಯನ್ನು ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunitha Williams) ಅವರನ್ನು ಕೇಳಲಾಗಿದೆ. ಅದಕ್ಕೆ ಅವರು, “ಅದ್ಭುತ” ಎಂದು ವರ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಅದಮ್ಯವಾದ ಹಿಮಾಲಯದ ಸೌಂದರ್ಯವನ್ನು ನೋಡಿದ ಬಗೆಯನ್ನೂ ಅವರು ವಿವರಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿನ 286 ದಿನಗಳ ವಾಸ್ತವ್ಯ ಮುಗಿಸಿ ವಾಪಸ್ ಬರುತ್ತಿದ್ದಂತೆ ಭಾರತವನ್ನು ನೋಡಿದಾಗ, “ಅದ್ಭುತ, ಅತ್ಯದ್ಭುತ” ಭಾವ ಮೂಡಿತು ಎಂದಿದ್ದಾರೆ. “ಭಾರತ ಅದ್ಭುತವಾಗಿದೆ. ಪ್ರತಿ ಬಾರಿ ನಾವು ಹಿಮಾಲಯವನ್ನು ದಾಟಿ ಮುಂದೆ ಹೋದಾಗ, ನನ್ನ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅತಿ ಸುಂದರವಾದ ಫೋಟೋಗಳನ್ನು ಸೆರೆಹಿಡಿದಿದ್ದರು ಎಂದೂ ಸುನೀತಾ ವಿವರಿಸಿದರು.
ತನ್ನ ಭಾರತೀಯ ಬೇರುಗಳ ಬಗ್ಗೆ ಆಗಾಗ್ಗೆ ನೆನಪಿಸಿಕೊಳ್ಳುವ ಅಮೆರಿಕದ ಗಗನಯಾತ್ರಿ ಸುನೀತಾ, ಮೇಲಿನಿಂದ ಭಾರತೀಯ ಭೂದೃಶ್ಯವನ್ನು ನೋಡಿ ಮಂತ್ರಮುಗ್ಧಳಾಗುತ್ತಿದ್ದೆ. ಪಶ್ಚಿಮದಲ್ಲಿನ ಮೀನುಗಾರಿಕಾ ಹಡಗುಗಳಿಂದ ಹಿಡಿದು ಉತ್ತರದಲ್ಲಿ ಭವ್ಯವಾದ ಹಿಮಾಲಯದವರೆಗೆ ಎಲ್ಲ ದೃಶ್ಯಗಳೂ ರಮಣೀಯ ಎಂದರು.
“ಭಾರತವು ಒಂದು ಬಣ್ಣ ಬಣ್ಣದ ಲೋಕ. ನೀವು ಪೂರ್ವದಿಂದ ಗುಜರಾತ್ ಮತ್ತು ಮುಂಬೈಗೆ ಹೋದಾಗ, ಅಲ್ಲಿನ ಕರಾವಳಿಯ ಮೀನುಗಾರಿಕೆಯು ಎಲ್ಲರನ್ನು ಸೆಳೆಯುತ್ತದೆ. ಭಾರತದಾದ್ಯಂತ ದೊಡ್ಡ ನಗರದಿಂದ ಸಣ್ಣಸಣ್ಣ ಹಳ್ಳಿಗಳವರೆಗೂ ದೊಡ್ಡ ಬೆಳಕಿನ ಜಾಲ ಕಾಣಿಸುತ್ತದೆ. ಅದನ್ನು ನೋಡುವುದೇ ಚಂದ” ಎಂದಿದ್ದಾರೆ.
ಇದೇ ವೇಳೆ, ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ನಾಸಾದ ಮುಂಬರುವ ಆಕ್ಸಿಯಮ್ ಯೋಜನೆ ಬಗ್ಗೆ ತಾವು ಉತ್ಸುಕರಾಗಿರುವುದಾಗಿಯೂ ಸುನೀತಾ ಹೇಳಿದ್ದಾರೆ. ಈ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ತೆರಳುವವರ ಪೈಕಿ ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್ ಮತ್ತು ಇಸ್ರೋ ಗಗನಯಾತ್ರಿ ಸುಭಾಂಶು ಶುಕ್ಲಾ ಕೂಡ ಒಬ್ಬರು.
ಬಗ್ಗೆ ಪ್ರತಿಕ್ರಿಯಿಸಿದ ಸುನೀತಾ,
“ವಾವ್, ಈ ಯೋಜನೆಯಲ್ಲಿ ನಮ್ಮದೇ ಊರಿನ ಹೀರೋ ಇರುವುದು ಖುಷಿಯ ವಿಚಾರ” ಎಂದಿದ್ದಾರೆ.
ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಸಹಾಯ ಮಾಡುತ್ತೀರಾ ಎಂಬ ಪ್ರಶ್ನೆಗೆ ಸುನೀತಾ ವಿಲಿಯಮ್ಸ್, “ಮುಂದೊಂದು ದಿನ ನಾವು ಭೇಟಿಯಾಗಿ, ನಮ್ಮ ಅನುಭವಗಳನ್ನು ಭಾರತದ ಜನರೊಂದಿಗೆ ಹಂಚಿಕೊಳ್ಳಬಹುದು. ಏಕೆಂದರೆ ಭಾರತವು ಒಂದು ಅತ್ಯುತ್ತಮ ದೇಶ. ಮತ್ತೊಂದು ಅದ್ಭುತ ಪ್ರಜಾಪ್ರಭುತ್ವ. ಭಾರತವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದು, ಅದರ ಭಾಗವಾಗಲು ಮತ್ತು ಸಹಾಯ ಮಾಡಲು ನಾನು ಇಷ್ಟಪಡುತ್ತೇನೆ” ಎಂದರು.