ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಅವರು ಯಾರನ್ನೂ ಭೇಟಿ ಮಾಡುತ್ತಿಲ್ಲ. ಆರೋಗ್ಯದ ಬಗ್ಗೆ ಡಿಕೆಶಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೂರು ದಿನಗಳ ಕಾಲ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ನಾಳೆಯಿಂದ ಮೂರು ದಿನಗಳ ಕಾಲ ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಮಾಡಲು ಆಗುತ್ತಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಡಿಕೆ ಶಿವಕುಮಾರ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಡಿಕೆಶಿ ಆರೋಗ್ಯ ಹದಗೆಟ್ಟಿದ್ದು, ಖಚಿತವಾಗಿದೆ.
ಜ್ವರದಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರ ಜ್ವರದಿಂದ ಬಳಲುತ್ತಿದ್ದ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದ್ದು, ನಮ್ಮ ಪಿಸಿಸಿ ಅಧ್ಯಕ್ಷರು ಮತ್ತು ಉಪ ಮುಖ್ಯಮಂತ್ರಿಗಳು ಶೀಘ್ರವಾಗಿ ಚೇತರಿಸಿಕೊಂಡು ಜನರ ಸೇವೆಯಲ್ಲಿ ನಿರತವಾಗಬೇಕೆಂದು ಹಾರೈಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುರ್ಜೆವಾಲ ಬರೆದುಕೊಂಡಿದ್ದಾರೆ.



















