ಕೊಪ್ಪಳ: ತಾಯಿ ಕಳೆದುಕೊಂಡ ನೋವಿನಲ್ಲೇ ವಿದ್ಯಾರ್ಥಿಯೋರ್ವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಜಿಲ್ಲೆಯ (Koppal) ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಅಡಿವಯ್ಯ ಸ್ವಾಮಿ, ತಾಯಿ ಸಾವಿನ ದುಃಖದಲ್ಲೂ ಹೋಗಿ ಪರೀಕ್ಷೆ ಬರೆದಿದ್ದಾನೆ. ಮಗ ಪರೀಕ್ಷೆ ಬರೆದ ನಂತರ ತಾಯಿಯ ಅಂತ್ಯಸಂಸ್ಕಾರ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರಿನ ಅಡಿವಯ್ಯ ಸ್ವಾಮಿ, ಕೇಸರಹಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ. ಪರೀಕ್ಷೆ ಬರೆಯಬೇಕು ಎನ್ನುವರಷ್ಟರಲ್ಲಿ ಅಡಿವೆಯ್ಯ ಸ್ವಾಮಿ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಸಾವನ್ನಪ್ಪಿದ್ದಾರೆ.
ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ಅಡಿವೆಯ್ಯ ಸ್ವಾಮಿ ಪರೀಕ್ಷೆ ಬರೆದಿದ್ದಾನೆ. ತಾಯಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ ಹಿಂದೆ ಸ್ನಾನದ ಕೋಣೆಯಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.