ಬೆಂಗಳೂರು: ತೆರಿಗೆ ಉಳಿತಾಯ, ನಿವೃತ್ತಿ ಜೀವನವನ್ನು ಸುಲಭವಾಗಿ ಸಾಗಿಸುವುದು, ಪುತ್ರಿಯ ಭವಿಷ್ಯಕ್ಕಾಗಿ ಹೆಚ್ಚಿನ ಜನ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಹಾಗೂ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂಚೆ ಕಚೇರಿಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ಆದರೆ, ಹೆಚ್ಚಿನ ಜನ ಪ್ರತಿ ವರ್ಷ ಯೋಜನೆಗಳ ಅನ್ವಯ ಠೇವಣಿ ಮಾಡಬೇಕಾದ ಕನಿಷ್ಠ ಮೊತ್ತವನ್ನೂ ಠೇವಣಿ ಮಾಡುವುದಿಲ್ಲ. ಹೀಗೆ 2025-26ನೇ ಸಾಲಿನಲ್ಲಿ ಕನಿಷ್ಠ ಮೊತ್ತವನ್ನು ಮಾರ್ಚ್ 31ರೊಳಗೆ ಠೇವಣಿ ಮಾಡದಿದ್ದರೆ ಹೂಡಿಕೆಯ ಖಾತೆಗಳೇ ನಿಷ್ಕ್ರಿಯವಾಗುತ್ತವೆ.
ಹೌದು, ನಿಯಮಗಳ ಪ್ರಕಾರ, ಈ ಉಳಿತಾಯ ಯೋಜನೆಗಳಲ್ಲಿ ಪ್ರತಿ ವರ್ಷ ನಿರ್ದಿಷ್ಟ ಕನಿಷ್ಠ ಮೊತ್ತವನ್ನು ಕಡ್ಡಾಯವಾಗಿ ಜಮೆ ಮಾಡಬೇಕು. ಒಂದು ವೇಳೆ ಯಾವುದೇ ಹಣಕಾಸು ವರ್ಷದಲ್ಲಿ ಈ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಆ ಖಾತೆಯನ್ನು ಡಿಫಾಲ್ಟ್ ಅಥವಾ ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಖಾತೆಗಳನ್ನು ಮರಳಿ ಸಕ್ರಿಯಗೊಳಿಸಲು ಬಾಕಿ ಇರುವ ಮೊತ್ತದ ಜತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯಲ್ಲಿ ಖಾತೆಯು ಸಕ್ರಿಯವಾಗಿರಲು ವರ್ಷಕ್ಕೆ ಕನಿಷ್ಠ 250 ರೂ. ಠೇವಣಿ ಮಾಡುವುದು ಕಡ್ಡಾಯ. ಒಂದು ವೇಳೆ ಮಾಡದಿದ್ದರೆ ಪ್ರತಿ ವರ್ಷಕ್ಕೆ 50 ರೂ. ದಂಡ ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ಯೋಜನೆಗೆ ಸರ್ಕಾರವು ಗರಿಷ್ಠ ಶೇ. 8.2 ರಷ್ಟು ಬಡ್ಡಿಯನ್ನು ನೀಡುತ್ತಿದೆ.
ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ಉಳಿಸಿಕೊಳ್ಳಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ. ಜಮೆ ಮಾಡುವುದು ಕಡ್ಡಾಯ. ನಿಗದಿತ ಗಡುವಿನೊಳಗೆ ಠೇವಣಿ ಮಾಡದಿದ್ದಲ್ಲಿ ವರ್ಷಕ್ಕೆ 50 ರೂ. ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಪಿಪಿಎಫ್ ಖಾತೆದಾರರಿಗೆ ಶೇ. 7.1 ರಷ್ಟು ಬಡ್ಡಿ ಲಭ್ಯವಿದೆ. ಅದೇ ರೀತಿ, ಎನ್ ಪಿಎಸ್ ಖಾತೆಯಲ್ಲಿ ಕನಿಷ್ಠ 1 ಸಾವಿರ ರೂ. ಜಮೆ ಮಾಡಬೇಕಾಗಿದೆ.
ಒಂದು ವೇಳೆ ನೀವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೂ ಒಂದು ರೂಪಾಯಿಯನ್ನೂ ಜಮೆ ಮಾಡದಿದ್ದರೆ, ತಕ್ಷಣವೇ ಮೇಲೆ ತಿಳಿಸಿದ ಕನಿಷ್ಠ ಮೊತ್ತವನ್ನಾದರೂ ನಿಮ್ಮ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮುಂದಿನ ವರ್ಷದಿಂದ ನಿಮಗೆ ಬಡ್ಡಿ ಜಮೆಯಾಗದಿರುವುದರ ಜತೆಗೆ, ತೆರಿಗೆ ವಿನಾಯಿತಿಯ ಪ್ರಯೋಜನಗಳನ್ನೂ ಕಳೆದುಕೊಳ್ಳುತ್ತೀರಿ.
ಕೊನೆಯ ಕ್ಷಣದವರೆಗೆ ಕಾಯದಿರಿ
ಬಹಳಷ್ಟು ಜನರು ಮಾರ್ಚ್ 31 ರವರೆಗೆ ಕಾಯುತ್ತಿರುತ್ತಾರೆ. ಆದರೆ, ಹಣಕಾಸು ವರ್ಷದ ಕೊನೆಯ ದಿನಗಳಲ್ಲಿ ಬ್ಯಾಂಕ್ ರಜೆಗಳಿರಬಹುದು ಅಥವಾ ತಾಂತ್ರಿಕ/ಸರ್ವರ್ ಸಮಸ್ಯೆಗಳು ಎದುರಾಗಬಹುದು. ಇದರಿಂದಾಗಿ ನಿಮ್ಮ ವಹಿವಾಟು ವಿಫಲವಾದರೆ ಅನಗತ್ಯವಾಗಿ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಆದಷ್ಟು ಮುಂಚಿತವಾಗಿಯೇ ನಿಮ್ಮ ಠೇವಣಿಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಖಾತೆಯನ್ನು ಸಕ್ರಿಯವಾಗಿರಿಸಿಕೊಳ್ಳಿ.



















