ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿಸಿ, ಬಾಲ್ಟಿಮೋರ್ ಮತ್ತು ವರ್ಜೀನಿಯಾದ ರಿಚ್ಮಂಡ್‌ನಲ್ಲಿರುವ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರ ಸಂಜೆ ವಿಮಾನ ಸಂಚಾರವನ್ನು ಒಂದು ಗಂಟೆಗೂ ಹೆಚ್ಚು ಕಾಲ ದಿಢೀರನೆ ಸ್ಥಗಿತಗೊಳಿಸಲಾಗಿತ್ತು. ವಿಚಿತ್ರವಾದ ವಾಸನೆಯೇ ಇದಕ್ಕೆ ಕಾರಣ.
ಹೌದು, ವಿಚಿತ್ರ ರಾಸಾಯನಿಕ ವಾಸನೆಯೊಂದು (chemical smell) ಏರ್ ಟ್ರಾಫಿಕ್ ಕಂಟ್ರೋಲರ್‌ಗಳಿಗೆ ತೀವ್ರ ಕಳವಳ ಉಂಟುಮಾಡಿದ್ದರಿಂದ ವಿಮಾನಗಳ ಸಂಚಾರ ಅಸ್ತವ್ಯಸ್ತವಾಯಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.
ರೊನಾಲ್ಡ್ ರೇಗನ್ ವಾಷಿಂಗ್ಟನ್ ನ್ಯಾಷನಲ್ ಏರ್‌ಪೋರ್ಟ್, ವಾಷಿಂಗ್ಟನ್ ಡಲ್ಲೆಸ್ ಇಂಟರ್ನ್ಯಾಷನಲ್ ಏರ್‌ಪೋರ್ಟ್, ಬಾಲ್ಟಿಮೋರ್-ವಾಷಿಂಗ್ಟನ್ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಹಾಗೂ ರಿಚ್ಮಂಡ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗಳಲ್ಲಿ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್‌ಗೆ ತಡೆ ವಿಧಿಸಲಾಗಿತ್ತು. ವಾಷಿಂಗ್ಟನ್, ಬಾಲ್ಟಿಮೋರ್, ರಿಚ್ಮಂಡ್ ಮತ್ತು ಚಾರ್ಲೊಟ್ಟೆಸ್‌ವಿಲ್ಲೆ ಪ್ರದೇಶಗಳ ವಿಮಾನ ಸಂಚಾರವನ್ನು ನಿರ್ವಹಿಸುವ ಟರ್ಮಿನಲ್ ರಾಡಾರ್ ಅಪ್ರೋಚ್ ಕಂಟ್ರೋಲ್ (TRACON) ಕೇಂದ್ರವಾದ ‘ಪೊಟೊಮ್ಯಾಕ್’ನಿಂದ ಒಂದು ರೀತಿಯ ರಾಸಾಯನಿಕದಂಥ ವಾಸನೆ ತೀವ್ರವಾಗಿ ಬರತೊಡಗಿತ್ತು. ಎಲ್ಲೆಡೆಯೂ ಇದೇ ರೀತಿಯ ವಾಸನೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಿತ್ತು. ಎಲ್ಲರನ್ನೂ ಇದು ಗೊಂದಲಕ್ಕೀಡುಮಾಡಿತ್ತು. ಹೀಗಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ವಾಸನೆಯು ಕಂಟ್ರೋಲರ್‌ಗಳ ಕಾರ್ಯನಿರ್ವಹಣೆಗೆ ನಿಖರವಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಅಡ್ಡಿಯುಂಟುಮಾಡಿತು ಎಂಬುದರ ಕುರಿತು ಫೆಡರಲ್ ಏಜೆನ್ಸಿಯ ವಕ್ತಾರರು ತಕ್ಷಣಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ
ಅಮೆರಿಕದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಸಂಭವಿಸಿದ ಈ ಅನಿರೀಕ್ಷಿತ ಘಟನೆಯಿಂದಾಗಿ ವಿಮಾನಗಳ ಹಾರಾಟದಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಶುಕ್ರವಾರ ಸಂಜೆ 7 ಗಂಟೆಯ ಬಳಿಕ ವಿಮಾನಗಳು ನಿಲ್ದಾಣದಿಂದ ಹೊರಡಲು ಆರಂಭಿಸಿದರೂ, ಬೇರೆಡೆಯಿಂದ ಬರುವ ವಿಮಾನಗಳ ಲ್ಯಾಂಡಿಂಗ್ ಅನ್ನು ತಡೆಯುವ ‘ಗ್ರೌಂಡ್ ಸ್ಟಾಪ್’ ಆದೇಶವನ್ನು ಮಾತ್ರ ಹಾಗೆಯೇ ಮುಂದುವರಿಸಲಾಗಿತ್ತು. ಈ ಅನಿರೀಕ್ಷಿತ ತಡೆ ಆಜ್ಞೆಯ ಪರಿಣಾಮವಾಗಿ, ಈ ನಾಲ್ಕೂ ವಿಮಾನ ನಿಲ್ದಾಣಗಳಿಂದ ನಿರ್ಗಮಿಸಬೇಕಿದ್ದ ಶೇ.25ರಿಂದ 33 ರಷ್ಟು (ಮೂರನೇ ಒಂದು ಭಾಗದಷ್ಟು) ವಿಮಾನಗಳ ಹಾರಾಟ ವಿಳಂಬವಾಗಿದ್ದು, ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.
ಇದನ್ನೂ ಓದಿ : ಮಿತ್ರ ಭಾರತಕ್ಕೆ ಇರಾನ್ ಸಹಾಯಹಸ್ತ : ಹೊರ್ಮುಜ್ ಜಲಸಂಧಿ ದಾಟಿದ ಭಾರತದ 2 ಎಲ್‌ಪಿಜಿ ಟ್ಯಾಂಕರ್‌ಗಳು



















