ಬೆಂಗಳೂರು : ಈಗಾಗಲೇ ಮಳೆಯಿಂದ ಕಂಗಾಲಾಗಿರುವ ಹಿಮಾಚಲ ಪ್ರದೇಶದ ವಿಪತ್ತು ಪರಿಹಾರ ಮತ್ತು ಪುನರ್ವಸತಿಗೆ ಸಹಾಯ ಮಾಡಲು 5 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಕೇರಳದ ಆನೆ ಕಾಲ್ತುಳಿತ ಘಟನೆಗೆ 25 ಲಕ್ಷ ಪರಿಹಾರ ನೀಡಿದ್ದ ಕರ್ನಾಟಕ ಸರ್ಕಾರ ಇದೀಗ ಹಿಮಾಚಲ ಪ್ರದೇಶ ರಾಜ್ಯದ ನೆರವಿಗೆ ಮುಂದಾಗಿದೆ. ಹಿಮಾಚಲ ಪ್ರದೇಶದ ನೆರೆ ಹಾನಿಗೆ 5 ಕೋಟಿ ನೆರವು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶ ಸಿಎಂ ಸುಖವೀಂದರ್ ಸಿಂಗ್ ಗೆ ಪತ್ರ ಬರೆದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಅಪಾರ ಜೀವ, ಮನೆ ಮತ್ತು ಜೀವನೋಪಾಯಕ್ಕೆ ಹಾನಿ ಮಾಡಿದೆ. ಕರ್ನಾಟಕದ ಜನರೂ ಕೂಡ ಇಂತಹ ಸಂಕಷ್ಟದ ಸಮಯದಲ್ಲಿ ಹಿಮಾಚಲದ ಜನರೊಂದಿಗೆ ನಿಲ್ಲುತ್ತಾರೆ. ಬೆಂಬಲದ ಸಂಕೇತವಾಗಿ, ಕರ್ನಾಟಕ ಸರ್ಕಾರ ಪರಿಹಾರ ಮತ್ತು ಪುನರ್ವಸತಿಗಾಗಿ ₹5 ಕೋಟಿ ಕೊಡುಗೆ ನೀಡುತ್ತಿದೆ. ಈ ದುಃಖದ ಸಮಯದಲ್ಲಿ, ಸುಖವಿಂದರ್ ಸಿಂಗ್ ಸುಖು ಜಿ, ಮತ್ತು ಹಿಮಾಚಲದ ಜನರೊಂದಿಗೆ ನಾವು ಹೆಗಲಿಗೆ ಹೆಗಲಿಗೆ ಕೊಟ್ಟು ನಿಲ್ಲುತ್ತೇವೆ ಎಂದು ಸಿಎಂ ಪತ್ರ ಬರೆದಿದ್ದಾರೆ.
ಆದರೆ ಈ ಹಿಂದೆ ಕೇರಳದ ಆನೆ ಕಾಲ್ತುಳಿತ ಘಟನೆಗೆ ಪರಿಹಾರ ನೀಡಿದ್ದ ಸರ್ಕಾರದ ನಡೆಯನ್ನು ಬಿಜೆಪಿ – ಜೆಡಿಎಸ್ ಟೀಕೆ ಮಾಡಿದ್ದವು. ರಾಜ್ಯದಲ್ಲಿ ಮಳೆ ಹಾನಿಗೆ ಸರ್ಕಾರದ ಹಣವಿಲ್ಲ. ಆದರೆ ಅನ್ಯ ರಾಜ್ಯ ಗಳಿಗೆ ಹೆಚ್ಚು ಹಣದ ನೆರವು ಎಂದು ಟೀಕೆ ಮಾಡಿದ್ದವು. ಈಗ ಹಿಮಾಚಲ ಪ್ರದೇಶಕ್ಕೆ ಸರ್ಕಾರದ ಪರಿಹಾರದ ನಿರ್ಧಾರದ ವಿರುದ್ಧವೂ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ.



















