ಪಾಟ್ನಾ : ಬಿಹಾರದ ನಳಂದಾ ಜಿಲ್ಲೆಯ ಪ್ರಸಿದ್ಧ ಮಾತಾ ಶೀತಲಾ ದೇವಾಲಯದಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ 8 ಮಂದಿ ಮಹಿಳಾ ಭಕ್ತರು ಸಾವಿಗೀಡಾದ ಘಟನೆ ನಡೆದಿದೆ. ಈ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ ದೇವಾಲಯದಲ್ಲಿ ಅತಿಯಾದ ಜನದಟ್ಟಣೆ ಸೇರಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ನಳಂದಾ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಮಘ್ರಾ ಗ್ರಾಮದ ಶೀತಲಾಷ್ಟಮಿ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಜನದಟ್ಟಣೆ ಹೆಚ್ಚಾಗಿ ಗೊಂದಲ ನಿರ್ಮಾಣವಾಯಿತು. ಇದರಿಂದಾಗಿ ಜನರು ದಿಕ್ಕಾಪಾಲಾಗಿ ಓಡತೊಡಗಿದ್ದರಿಂದ ಕಾಲ್ತುಳಿತ ಉಂಟಾಯಿತು. ಸ್ಥಳದಲ್ಲಿ ಮಹಿಳೆಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ದೃಶ್ಯಗಳು ನೋಡುಗರ ಎದೆ ಝಲ್ಲೆನಿಸುವಂತಿತ್ತು. ಕೆಲವರು ಸಿಪಿಆರ್ ನೀಡುವ ಮೂಲಕ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದುದು ಕೂಡ ಕಂಡುಬಂದಿದೆ.
ಆಡಳಿತ ಮಂಡಳಿಯ ವೈಫಲ್ಯಕ್ಕೆ ಆಕ್ರೋಶ
ಘಟನೆಯ ಬಗ್ಗೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರತಿ ಮಂಗಳವಾರ ಇಲ್ಲಿ ಜನದಟ್ಟಣೆ ಇರುತ್ತದೆ, ಅದರಲ್ಲೂ ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ ಭಕ್ತರ ಸಂಖ್ಯೆ ಅತಿ ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿಯಂತ್ರಣ ಮಾಡದಿರುವುದು ಈ ದುರಂತಕ್ಕೆ ಕಾರಣ,” ಎಂದು ಪಾಟ್ನಾದಿಂದ ಬಂದಿದ್ದ ಭಕ್ತೆ ಮಮತಾ ದೇವಿ ಆರೋಪಿಸಿದ್ದಾರೆ. ಬ್ಯಾರಿಕೇಡ್‌ಗಳ ವ್ಯವಸ್ಥೆ ಇದ್ದರೂ ಸಹ, ಏಕಾಏಕಿ ಉಂಟಾದ ನೂಕುನುಗ್ಗಲನ್ನು ನಿಭಾಯಿಸಲು ಆಡಳಿತ ವಿಫಲವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ
ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 6 ಲಕ್ಷ ರೂಪಾಯಿ (ವಿಪತ್ತು ಪರಿಹಾರ ನಿಧಿಯಿಂದ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.) ಆರ್ಥಿಕ ನೆರವನ್ನು ಅವರು ಘೋಷಿಸಿದ್ದಾರೆ.
ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯೂ ಇದೆ.
ಇದನ್ನೂ ಓದಿ : ರಾತ್ರೋರಾತ್ರಿ 2 ಎಕರೆ ಬಾಳೆ ತೋಟ ನಾಶ ಮಾಡಿದ ದುಷ್ಕರ್ಮಿಗಳು


















