ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರು ತೆರಳುತ್ತಿದ್ದಾರೆ. ಆದರೆ, ಈಗ ದುರಂತವೊಂದು ಸಂಭವಿಸಿದ್ದು, ಕಾಲ್ತುಳಿತಕ್ಕೆ 50ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಮೌನಿ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಜನ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ಮಹಿಳೆಯರು, ವೃದ್ಧರು ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ, ಗಂಗಾದಲ್ಲಿ ಅಮೃತ ಸ್ನಾನ ಅಥವಾ ಸಾಮೂಹಿಕ ಪವಿತ್ರ ಸ್ನಾನದಲ್ಲಿ ವಿಳಂಬವಾಯಿತು. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾ ಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. 10 ಕೋಟಿಗೂ ಅಧಿಕ ಭಕ್ತರು ಈ ಪವಿತ್ರ ಕುಂಭ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಜನ ಕಿಕ್ಕಿರಿದು ತುಂಬಿದ್ದರಿಂದಾಗಿ ರಕ್ಷಣಾ ಕಾರ್ಯಾಚರಣೆ ಕೂಡ ವಿಳಂಬವಾಗಿ ಸಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್ ವಾಹನಗಳು ಕಷ್ಟಪಟ್ಟು ತೆರಳುವಂತಾಗುತ್ತಿದೆ. ಸ್ನಾನಘಟ್ಟದ ಬಳಿ ನೆರೆದಿದ್ದ ಜನಜಂಗುಳಿಯಿಂದ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಾಕುಂಭದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳಿಂದ ಪರಿಸ್ಥಿತಿ ಹತೋಟಿ ತಪ್ಪಿದೆ ಎನ್ನಲಾಗಿದೆ.