ಸತತ ಮಳೆ-ಗಾಳಿಯ ಪರಿಣಾಮ ಕರಾವಳಿ ಭಾಗದಲ್ಲಿ ಜನಜೀವಪ ಅಸ್ಥವ್ಯೆಸ್ಥಗೊಂಡಿದೆ. ಎಲ್ಲಿ ಕಂಡರಲ್ಲಿ ನೀರು ತುಂಬಿ ಹರಿದು, ಸಾರ್ವಜನಿಕ ವಲಯ ಕಂಗೆಟ್ಟು ಕೂತಿದೆ. ಕೆಲಸ-ಕಾರ್ಯಗಳು ಅಂದುಕೊಂಡಂತೆ ಸಾಗುತ್ತಿಲ್ಲ; ಎಲ್ಲವೂ ವಿಪರೀತ ಮಳೆ-ಗಾಳಿ-ನೆರೆಯಿಂದಾಗಿ ಅಯೋಮಯವಾಗಿದೆ. ಅದರಲ್ಲೂ ಸೌಪರ್ಣಿಕ ನದಿಯ ನೀರು ತುಂಬಿ ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಪ್ರತಿ ಸಾರಿಯಂತೆ ನೆರೆಪೀಡಿತ ಪ್ರದೇಶಗಳೆಂದು ಗುರುತಿಸಲಾಗುವ
ಅರೆಹೊಳೆ, ಚಿಕ್ತಾಡಿ, ಹೇರೂರು, ನಾವುಂದ ಸಾಲ್ಬುಡ, ಬಡಾಕೆರೆ, ಸೇರಿದಂತೆ ತಗ್ಗು ಪ್ರದೇಶದಲ್ಲಿ ವಾಸವಿರುವವರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಸುರಕ್ಷತಾ ಕ್ರಮಕ್ಕಾಗಿ ಮನವಿ ಮಾಡಲಾಗಿದೆ.

ಪ್ರತಿ ವರ್ಷ ಮಳೆಗಾಲ ಬಂತೆಂದರೆ ಸೌಪರ್ಣಿಕ ನದಿ ತಟದ ಹಲವು ತಗ್ಗು ಪ್ರದೇಶದ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ಇಲ್ಲಿನ ನೂರಾರು ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಪ್ರತಿ ವರ್ಷವೂ ಈ ಸಮಸ್ಯೆ ಇದ್ದೇ ಇದೆಯಾದರೂ, ಇದಕ್ಕೊಂದು ಬದಲಿ ವ್ಯವಸ್ಥೆಯ ಚಿಂತನೆ ಸಹ ನಡೆಯದಿರುವುದು ದುರಂತ! ಚುನಾವಣೆಯ ಸಮಯಕ್ಕೆ ಮತ ಕೇಳಲು ಬರುವ ಜನಪ್ರತಿನಿಧಿಗಳು, ನೆಪ ಮಾತ್ರಕ್ಕೆ ಮಳೆಗಾಲದ ನೆರೆ ಸಮಯದಲ್ಲಿ ಬಂದು ವೀಕ್ಷಿಸಿ ಹೋದವರು ಮತ್ತೆ ಈ ಕಡೆ ತಲೆ ಹಾಕುವುದಿಲ್ಲ!. ಸರ್ಕಾರಿ ಅಧಿಕಾರಿಗಳು ಮಳೆಗಾಲದ ಮೊದಲು ಬಂದು ಸ್ಥಳವನ್ನು ವೀಕ್ಷಿಸುತ್ತಾರೆಯೇ ಹೊರತು; ಶಾಶ್ವತ ಪರಿಹಾರದ ರೂಪದಲ್ಲಿ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ!

ಹಾಗೆ ನೋಡಿದರೇ, ನಾವುಂದ, ಅರೆಹೊಳೆ, ಬಡಾಕೆರೆ,ಮರವಂತೆ ಸಾಲ್ಬುಡ,ಕಡ್ಕಿ, ಹೇರೂರು, ಚಿಕ್ತಾಡಿ, ನಾಡಾ,ಕೂಡ್ಗಿತ್ಲು, ಕೋಣ್ಕಿ, ಗುಡ್ಡಮ್ಮಾಡಿ, ಹಡವು, ಕುದ್ರು,ಮರವಂತೆ, ಮಾರಸ್ವಾಮಿ, ಚಿಕ್ಕಳ್ಳಿ, ಪಡುಕೋಣೆಯ ಭಾಗದಲ್ಲಿ, ನೆರೆ ಸಮಸ್ಯೆ ಈ ವರ್ಷವೇನೂ ಹೊಸತಲ್ಲ. ಹಲವು ದಶಕಗಳಿಂದ ಇಲ್ಲಿನ ಜನಕ್ಕೆ ಮಳೆಗಾಲ ಶಾಪವೆಂದರೂ ತಪ್ಪಾಗದು.
ಒಟ್ಟಿನಲ್ಲಿ ಇಲ್ಲೊಂದು ಶಾಶ್ವತ ಪರಿಹಾರದ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಸಹ, ಸಂಬಂಧಪಟ್ಟವರು ದಿವ್ಯ ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದಾರೆ. ಅಸಲಿಗೆ ಈ ಭಾಗದ ಜನ ಚುನಾವಣೆಯ ಸಮಯದಲ್ಲಿ ಮತ ಕೇಳಲು ಬರುವವರ ಕಿವಿ ಹಿಂಡಿದ್ದಿದ್ದರೇ, ಈ ನಿರ್ಲಕ್ಷ್ಯ ಆಗುತ್ತಿರಲಿಲ್ಲ.

ಇನ್ನು ನೆರೆ ಬಂದ ಪ್ರದೇಶಗಳ ಜನರ ಸುರಕ್ಷತೆಗೆ ಬರುವ ಸರ್ಕಾರಿ ಸಿಬ್ಬಂದಿಗಳಿಗೆ ಸರಿಯಾದ ಲೈಫ್ ಜಾಕೆಟ್ ವ್ಯೆವಸ್ಥೆ ಇಲ್ಲ ಎಂದಾದರೆ, ಇನ್ನೆಷ್ಟು ಬೇಜವಾಬ್ಧಾರಿತನ ಈ ಅಧಿಕಾರಿಗಳ ತಲೆಹೊಕ್ಕಿರಬೇಕು!! ಪ್ರತಿ ಬಾರಿಯೂ ನೆರೆ ಹಾವಳಿಗೆ ತುತ್ತಾಗುವ ತಗ್ಗು ಪ್ರದೇಶವನ್ನು ನೆರ ಪೀಡಿತ ಪ್ರದೇಶಗಳೆಂದು ಗುರುತಿಸಿ ಶಾಶ್ವತ ಪರಿಹಾರಕ್ಕೆ ಇವರು ಮನಮಾಡುವುದೇ ಇಲ್ಲ. ಜಾನುವಾರುಗಳ ರಕ್ಷಣೆಗಾಗಿ, ಮಳೆಗಾಲದ ಇಂತಹ ತುರ್ತಿನ ಸಂದರ್ಭದಲ್ಲಿ ಸಹಾಯಕ್ಕೆ ಬರುವಂತೆ, ಸರ್ಕಾರದಿಂದ ಗೋಮಾಳ ಜಾಗ ಗುರುತಿಸಿ ತಾತ್ಕಾಲಿಕ ಶೆಡ್ ಗಳ ವ್ಯವಸ್ಥೆ ಮಾಡುವುದಕ್ಕೂ ಇವರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಕಾಲುವೆಗಳ ದುರಸ್ಥಿಗೂ ಇವರ ಕಣ್ಣು ಹಾಯುತ್ತಿಲ್ಲ.

ಅಸಲಿಗೆ, ಇದರಲ್ಲಿ ಆ ಪ್ರದೇಶದ ಜನರ ತಪ್ಪು ಸಹ ಇದೆ. ಇವರುಗಳು, ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಬಿಟ್ಟು ಊರ ಉದ್ಧಾರದ ಇಂಥ ಕೆಲಸ ಮಾಡಿಸಿಕೊಳ್ಳಲು ಪಟ್ಟು ಹಿಡಿಯಬೇಕು. ನಿರ್ಲಕ್ಷಿಸುವವರನ್ನು ಬಹಿಷ್ಕಾರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಮತ್ತು ಅಧಿಕಾರಲ್ಲಿರುವ ರಾಜಕಾರಣಿಗಳ ಮನೆ ಮುಂದೆ ಪಟ್ಟು ಸಡಿಲಿಸದೆ ಧರಣಿ ಕೂರಬೇಕು. ಆಗಲೇ ಅಡ್ಡ ಕಸುಬಿ ಅಧಿಕಾರಿಗಳಿಗೆ, ಸಾರ್ವಜನಿಕರ ಕಷ್ಟಗಳ ಮೇಲೆ ರಾಜಕೀಯ ಮಾಡುವ ಸ್ವಾರ್ಥಿ ರಾಜಕಾರಣಿಗಳಿಗೆ ಚುರುಕು ಮುಟ್ಟೋದು. ಆ ಕೆಲಸ ಆಗಬೇಕಿದೆ. ಆಗಲಿ!!