ಬೆಳ್ತಂಗಡಿ: ಸೌಜನ್ಯ ತನಿಖೆಯ ವಿಚಾರವಾಗಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ದೂರು ನೀಡುವ ಸಲುವಾಗಿ ಇಂದು( ಗುರುವಾರ )ಮಧ್ಯಾಹ್ನ ಸೌಜನ್ಯಳ ತಾಯಿ ಆಗಮಿಸಿದ್ದರು.
ಸೌಜನ್ಯ ತಾಯಿ ಕುಸುಮಾವತಿ ಅವರು ಪೂರ್ವ ಮಾಹಿತಿ ನೀಡದೆ ಎಸ್.ಐ.ಟಿ. ಕಚೇರಿಗೆ ಬಂದ ಹಿನ್ನೆಲೆ, ಪೊಲೀಸರು ಒಳ ಪ್ರವೇಶ ನಿರಾಕರಿಸಿದ್ದಾರೆ.
ಚೆನ್ನಯ್ಯ ಎಂಬ ಮಾಸ್ಕ್ ಮ್ಯಾನ್ ಅತ್ಯಾಚಾರಗೊಂಡ ಸೌಜನ್ಯ ಮೃತ ದೇಹ ನೋಡಿರುವುದಾಗಿ ಎಸ್‌ಐಟಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕುರಿತ ಆಪಾದನೆಗಳನ್ನು ಆಧಾರವನ್ನಾಗಿಸಿಕೊಂಡು, ಅಧಿಕೃತ ದೂರು ಹಾಗೂ ಹೇಳಿಕೆಗಳನ್ನು ಸಲ್ಲಿಸಲು ಕುಸುಮಾವತಿ ತೀರ್ಮಾನಿಸಿದ್ದರು.
ಕಳೆದ ಸೋಮವಾರ ಇಲ್ಲವೇ ಮಂಗಳವಾರ ಹಾಜರಾಗುವ ಸುದ್ದಿ ಬಂದಿತ್ತು. ಆದರೆ ಗುರುವಾರ ಏಕಾಏಕಿ 2 ಕಾರುಗಳಲ್ಲಿ ಕಚೇರಿಗೆ ಆಗಮಿಸಿದ್ದರು.
ಸೌಜನ್ಯ ಪ್ರಕರಣ ಎಸ್‌ಐಟಿ ವ್ಯಾಪ್ತಿಗೆ ಬಾರದಿರುವ ಹಿನ್ನೆಲೆ ಅವರನ್ನು ಹಿಂದೆ ಕಳುಹಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಸಿಗದ ಹಿನ್ನೆಲೆ ಹಿಂದಿರುಗಿದ್ದಾರೆ ಎಂದೂ ಹೇಳಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ಇನ್ನಷ್ಟೇ ತಿಳಿದು ಬರಬೇಕಿದೆ.



















