ಇದು ಕಾದಂಬರಿಯಲ್ಲ. ವಾಸ್ತವದಲ್ಲಿ ನಡೆದ ಘಟನಾ ಸರಣಿಗಳ ಹಿಂದಿನ ಘೋರ ಸತ್ಯಗಳ ಅನಾವರಣ. ಲೇಖಕರು ಇಲ್ಲಿ ಮೂರೂವರೆ ದಶಕಗಳ ಹಿಂದೆ ಕಾಶ್ಮೀರಿ ಪಂಡಿತರಿಗೆ ಕೊಡಬಾರದ ಹಿಂಸೆ ಕೊಟ್ಟು ಅವರನ್ನು ತಮ್ಮ ಪ್ರೀತಿಯ ತಾಯಿನಾಡಿನಿಂದ ಓಡಿಹೋಗುವಂತೆ ಬಲತ್ಕರಿಸಿದ ಅಲ್ಲಿನ ಮುಸಲ್ಮಾನ ಬಾಂಧವರ ಹೇಯ ಕೃತ್ಯಗಳನ್ನು ಓದುಗರ ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ. ಮನುಷ್ಯರು ತಮ್ಮ ‘ಧರ್ಮ’ವನ್ನು ಉಳಿಸಿಕೊಳ್ಳಲು ಇಷ್ಟು ನೀಚರಾಗಬಲ್ಲರೇ ಎಂಬ ಪ್ರಶ್ನೆಯನ್ನು ಓದುಗರಲ್ಲಿ ಈ ಕೃತಿ ಹುಟ್ಟಿಸುತ್ತದೆ.
ಕಾಶ್ಮೀರದ ಮಣ್ಣಿನ ಮೂಲನಿವಾಸಿಗಳು ಈ ಹಿಂದೂ ಪಂಡಿತರು. ಮುಸಲ್ಮಾನರ ಆಕ್ರಮಣದ ನಂತರ ಅವರು ಅಲ್ಲಿ ಒಂದೊಂದೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದರು. ಅವರು ತಮ್ಮ ಕಣ್ಣ ಮುಂದೆಯೇ ತಮ್ಮ ದೇವಸ್ಥಾನಗಳು ವಿನಾಶಕ್ಕೊಳಗಾಗುವುದನ್ನು ನೋಡುತ್ತ ಅಸಹಾಯಕರಾಗಿ ಸಂಕಟ ಪಡುತ್ತಾ ನಿಲ್ಲಬೇಕಾಯಿತು.
ಸ್ವಾತಂತ್ರ್ಯಾ ನಂತರ ರಾಜಸತ್ತೆ ಹೋಗಿ ಪ್ರಜಾಸತ್ತೆಯು ಅಸ್ತಿತ್ವಕ್ಕೆ ಬಂದಾಗ ಅಲ್ಲಿ ರಾಜರಾಗಿದ್ದ ಹರಿಸಿಂಗ್ ಅವರ ಆಡಳಿತ ಕೊನೆಗೊಂಡಿತು. ಭಾರತದ ಸಂವಿಧಾನವು ತಾತ್ಕಾಲಿಕ ನೆಲೆಯ ಮೆಲೆ ಅಲ್ಲಿಗೆ 370ನೇ ವಿಧಿಯನ್ವಯ ಸ್ವಾಯತ್ತತೆ ನೀಡಿತು. ಅಲ್ಲಿಂದ ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರಿಂದ ರಾಜಕೀಯದಲ್ಲೂ ಸರ್ಕಾರಿ ಹುದ್ದೆಗಳಲ್ಲೂ ಮುಸ್ಲಿಮರೇ ತುಂಬಿಕೊಂಡರು. ಕೆಲವೆಡೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವೆ ಹಿಂದೂಗಳಿಗೆ ಅವಕಾಶ ನೀಡಲಾಯಿತು. ಸರ್ಕಾರಿ ಸಂಸ್ಥೆಗಳಲ್ಲಾಗಲಿ ಒಳ್ಳೆಯ ಕಂಪೆನಿಗಳಲ್ಲಾಗಲೀ ಹಿಂದೂ ಯುವಕರು ಎಷ್ಟೇ ಪ್ರತಿಭಾವಂತರೆಂದು ಸಾಬೀತು ಪಡಿಸಿದರೂ ಉದ್ಯೋಗಾವಕಾಶದಲ್ಲಿ ತಾರತಮ್ಯ ಮಾಡಲಾಯಿತು.
ಈ ಕೃತಿಯ ಲೇಖಕ ರಾಹುಲ್ ಅವರ ತಂದೆ ಒಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲೇ ಪ್ರೊಫೆಸರ್ ಆಗಿದ್ದರು. ಕಾಶ್ಮೀರದ ಮುಸ್ಲಿಮರು ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯವಾಗಬೇಕೆಂಬ ಉದ್ದೇಶದಿಂದ ಆಜಾದಿ ಹೋರಾಟ ಯಾವಾಗಲೂ ನಡೆಯುತ್ತಿತ್ತು. ಕೆಲವು ವರ್ಷಗಳ ತನಕ ಅಷ್ಟೇನೂ ಸಮಸ್ಯೆಗಳಿರಲಿಲ್ಲ. ಆದರೆ ಯಾವಾಗ ಜಿಹಾದ್ ಮತ್ತು ಇಸ್ಲಾಂ ಭಯೋತ್ಪಾದನೆ ಆರಂಭವಾಯಿತೋ ಅಂದಿನಿಂದ ಹಿಂದೂಗಳಿಗೆ ಜೀವ ಬೆದರಿಕೆ ಶುರುವಾಯಿತು. ಬೀದಿ ಬೀದಿಗಳಲ್ಲೂ ಬಾಂಬು-ಗುಂಡುಗಳಿಂದ ರಕ್ತದೋಕುಳಿ ಮತ್ತು ಸಾವುಗಳು ಸಂಭವಿಸುತ್ತಲೇ ಇದ್ದವು.
1990ರಲ್ಲಿ ಹಿಂದೂಗಳು ಒಂದೋ ಮತಾಂತರಗೊಳ್ಳಬೇಕು, ಇಲ್ಲವೇ ಊರು ಬಿಟ್ಟು ಹೋಗಬೇಕು, ಇಲ್ಲದಿದ್ದರೆ ಜೀವ ಸಹಿತ ಉಳಿಸುವುದಿಲ್ಲ ಎಂಬ ಮಾತುಗಳನ್ನು ಮಸೀದಿಯ ಧ್ವನಿವರ್ಧಕಗಳ ಮೂಲಕ ಘೋಷಿಸಲಾಯಿತು. ಭಾರತ ಸರ್ಕಾರವೂ ಅಲ್ಲಲ್ಲಿ ಸೈನಿಕರನ್ನು ನೇಮಿಸಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ಪರಿಣಾಮವಾಗಿ ಲಕ್ಷಗಟ್ಟಲೆ ಹಿಂದೂಗಳು ಸ್ವಲ್ಪಮಟ್ಟಿಗೆ ಸುರಕ್ಷಿತವೆನಿಸಿದ ಜಮ್ಮುವಿಗೂ ದೇಶದ ಇತರೆಡೆಗಳಿಗೂ ಮರಳಿ ಬರುವ ಭರವಸೆಯಿಂದ ವಲಸೆ ಹೋದರು. ಅಲ್ಲೆಲ್ಲ ಬದುಕು ಕಟ್ಟಿಕೊಳ್ಳಲು ಅವರು ಹರಸಾಹಸ ಪಟ್ಟರು. ಎನೇ ಆದರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಛಲವನ್ನು ಅವರು ಬಿಡಲಿಲ್ಲ. ಪರಿಸ್ಥತಿ ಹತೋಟಿಗೆ ಬಂದಿದೆಯೆಂದು ಅನ್ನಿಸಿದಾಗ ಅವರು ತಿರುಗಿ ತಮ್ಮ ಮನೆಗಳಿಗೆ ಹೋಗಿ ನೋಡಿದರೆ ಅವರ ಆಸ್ತಿ-ಮನೆಗಳೆಲ್ಲವನ್ನೂ ಅವರ ಜತೆಗೆ ಹಿಂದೆ ಸ್ನೇಹಪೂರ್ವಕವಾಗಿ ವ್ಯವಹರಿಸುತ್ತಿದ್ದ ಮುಸ್ಲಿಂ ನೆರೆಹೊರೆಯವರು ಆಕ್ರಮಿಸಿಕೊಂಡಿದ್ದರು. ತಮ್ಮ ತಾತ-ಮುತ್ತಾತರು ಕಟ್ಟಿಸಿದ ಹದಿನೆಂಟು ಕೋಣೆಗಳ ಬೃಹತ್ ಮನೆಯನ್ನು ಕಳೆದುಕೊಂಡ ರಾಹುಲ್ ಅವರು ಈ ವಿಷಯದ ಬಗ್ಗೆ ಹೇಳುವುದನ್ನು ಕೇಳಿದರೆ ಕರುಳು ಕಿತ್ತು ಬರುತ್ತದೆ.
ಮುಂದೆ ಬೇರೆಡೆಗೆ ವಲಸೆ ಬಂದ ಕುಟುಂಬಗಳ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉದ್ಯೋಗವನ್ನೂ ಪಡೆದು ಬದುಕಿನಲ್ಲಿ ನೆಲೆ ಕಂಡಿರುವುದು ಇಂದು ಇತಿಹಾಸ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿರುವ ರಾಹುಲ್ ತಮ್ಮ ಹಾಗೆ ಕಷ್ಟಗಳನ್ನು ಅನುಭವಿಸಿದ ನೂರಾರು ಮಂದಿಯನ್ನು ಸಂಪರ್ಕಿಸಿ ಅವರ ಅನುಭವಗಳನ್ನು ಕೇಳಿ ತಿಳಿದು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕೊಚ್ಚಿಯಲ್ಲಿ ಒಂದು ವೈದ್ಯಕೀಯ ಸಮ್ಮೇಳನದ ಸಂದರ್ಭದಲ್ಲಿ ಅಲ್ಲಿ ಬೀದಿ ವ್ಯಾಪಾರ ನಡೆಸುತ್ತಿದ್ದ ಕೆಲವು ಕಾಶ್ಮೀರಿ ಮುಸಲ್ಮಾನ ಯುವಕರು ‘ಹಿಂದೂ ಪಂಡಿತರನ್ನು ಅವತ್ತು ಹೋಗಿ ಎಂದು ಯಾರೂ ಬಲಾತ್ಕಾರ ಮಾಡಿಲ್ಲ. ಅವರೇ ಹೆದರಿ ಓಡಿ ಹೋದರು’ ಎಂದು ಮುಂತಾಗಿ ಹೇಳುತ್ತಿರುವುದನ್ನು ಕೇಳಿದಾಗ ಇತಿಹಾಸದಲ್ಲಿ ನಡೆದ ಘಟನೆಗಳನ್ನು ದಾಖಲಿಸಲೇ ಬೇಕು ಎಂದೆಣಿಸಿ ಅವರು ಈ ಕೃತಿಯನ್ನು ಬರೆದಿದ್ದೇನೆ ಅಂದಿದ್ದಾರೆ. ಇದರಲ್ಲಿ ಯಾವುದೇ ಪೊಲಿಟಿಕಲ್ ಅಜೆಂಡಾ ಇಲ್ಲ. ಬೆರಳೆಣಿಕೆಯ ಕೆಲವು ಮಂದಿ ಸಹೃದಯರಾದ ಮುಸ್ಲಿಂ ಸ್ನೇಹಿತರನ್ನು ಅವರು ಇಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ. ಈ ಕೃತಿಯನ್ನು ತಮ್ಮ ಅನುವಾದಕ್ಕೆ ಆಯ್ದುಕೊಂಡು ಖ್ಯಾತ ಲೇಖಕ ಉದಯಕುಮಾರ್ ಹಬ್ಬು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

-ಡಾ.ಪಾರ್ವತಿ ಜಿ.ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ
ಕೃತಿಯ ಹೆಸರು : ಕಣ್ಣೀರ ಕಣಿವೆ
ಮೂಲ ಇಂಗ್ಲಿಷ್: ಡಾ.ರಾಹುಲ್ ಮ್ಯಾಗಜಿನ್
ಕನ್ನಡಕ್ಕೆ : ಉದಯಕುಮಾರ್ ಹಬ್ಬು
ಪ್ರ : ಅಯೋಧ್ಯಾ ಪ್ರಕಾಶನ