ಅಂಜಾರ್ (ಗುಜರಾತ್): ಪ್ರೀತಿ ಮತ್ತು ಮದುವೆಯ ಕನಸು ಕಾಣುತ್ತಿದ್ದ ಜೋಡಿಯೊಂದರ ಜೀವನ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ದುರಂತ ಅಂತ್ಯ ಕಂಡಿದೆ. ಗುಜರಾತ್‌ನ ಕಛ್ ಜಿಲ್ಲೆಯ ಅಂಜಾರ್‌ನಲ್ಲಿ, ಸಿಆರ್‌ಪಿಎಫ್ ಯೋಧನೊಬ್ಬ ತನ್ನ ಪ್ರೇಯಸಿಯಾಗಿದ್ದ ಮಹಿಳಾ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ASI) ಅನ್ನೇ ಕೊಲೆ ಮಾಡಿ, ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೇ ಬಂದು ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಮೃತರನ್ನು ಅಂಜಾರ್ ಪೊಲೀಸ್ ಠಾಣೆಯ ಎಎಸ್‌ಐ ಅರುಣಾಬೆನ್ ನಟುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಆರೋಪಿ ದಿಲೀಪ್ ದಂಗಚಿಯಾ ಮಣಿಪುರದಲ್ಲಿ ಸಿಆರ್‌ಪಿಎಫ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರ ಪ್ರಕಾರ, ಜುಲೈ 18ರ ಶುಕ್ರವಾರ ರಾತ್ರಿ ಅಂಜಾರ್‌ನ ತಮ್ಮ ನಿವಾಸದಲ್ಲಿ ಅರುಣಾಬೆನ್ ಮತ್ತು ದಿಲೀಪ್ ನಡುವೆ ಜಗಳವಾಗಿದೆ. ಈ ವೇಳೆ ಅರುಣಾಬೆನ್, ದಿಲೀಪ್‌ನ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ದಿಲೀಪ್, ಅರುಣಾಬೆನ್‌ರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೃತ್ಯದ ನಂತರ, ಆರೋಪಿ ದಿಲೀಪ್ ಅವರು ಫಿನಾಯಿಲ್ ಸೇವಿಸಿ, ತಮ್ಮ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಅವರು ಬದುಕುಳಿದಿದ್ದಾನೆ. ಮರುದಿನ ಬೆಳಿಗ್ಗೆ, ಅರುಣಾಬೆನ್ ಕರ್ತವ್ಯ ನಿರ್ವಹಿಸುತ್ತಿದ್ದ ಅಂಜಾರ್ ಪೊಲೀಸ್ ಠಾಣೆಗೆ ನೇರವಾಗಿ ತೆರಳಿ ಕೊಲೆಯ ವಿಚಾರವನ್ನು ತಿಳಿಸಿ, ತಪ್ಪೊಪ್ಪಿಕೊಂಡಿದ್ದಾನೆ.
ದಿಲೀಪ್ ಮತ್ತು ಅರುಣಾಬೆನ್ ಇಬ್ಬರೂ ಸುರೇಂದ್ರನಗರ ಜಿಲ್ಲೆಯ ಸಮೀಪದ ಗ್ರಾಮಗಳವರಾಗಿದ್ದರು. 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಇವರಿಬ್ಬರು, ಅಂದಿನಿಂದ ಲಿವ್-ಇನ್ ಸಂಬಂಧದಲ್ಲಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.
ಅಂಜಾರ್ ವಿಭಾಗದ ಡಿವೈಎಸ್‌ಪಿ ಮುಕೇಶ್ ಚೌಧರಿ ಅವರು ಘಟನೆಯನ್ನು ದೃಢಪಡಿಸಿದ್ದು, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಡಿಜಿಟಲ್ ಸಾಕ್ಷ್ಯ ಮತ್ತು ಫೋರೆನ್ಸಿಕ್ ವರದಿಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದಿದ್ದಾರೆ.