ನವದೆಹಲಿ: ಟೀಂ ಇಂಡಿಯಾದ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಅವರು ಕಾಶ್ಮೀರದ ಪುಟ್ಟ ಅಭಿಮಾನಿಯೊಬ್ಬರಿಗೆ ನೀಡಿದ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್ ಅವರು ಇತ್ತೀಚೆಗೆ ಕಾಶ್ಮೀರದ ಅರು ಕಣಿವೆಯಲ್ಲಿ (Aru Valley) ಪ್ರವಾಸದಲ್ಲಿದ್ದಾಗ, ಅಲ್ಲಿನ ಪುಟ್ಟ ಬಾಲಕಿಯೊಬ್ಬಳನ್ನು ಭೇಟಿಯಾಗಿದ್ದರು. ಆಕೆ ತಾನು ಸ್ಮೃತಿ ಮಂಧಾನ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಳು. “ನಾನು ಸ್ಮೃತಿ ಮಂಧಾನ ಅವರ ಫ್ಯಾನ್ ಎಂದು ಅವರಿಗೆ ತಿಳಿಸಿ,” ಎಂದು ಆ ಬಾಲಕಿ ಕಬೀರ್ ಖಾನ್ ಬಳಿ ಕೇಳಿಕೊಂಡಿದ್ದಳು.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದ ಕಬೀರ್ ಖಾನ್, “ಕಾಶ್ಮೀರದಲ್ಲಿ ನನ್ನ ಕ್ಯಾಮೆರಾದೊಂದಿಗೆ ಓಡಾಡುವಾಗ ಇಂತಹ ಮಾಂತ್ರಿಕ ಕ್ಷಣಗಳು ಸಿಗುತ್ತವೆ. ಅರು ಕಣಿವೆಯ ಈ ಪುಟ್ಟ ಹುಡುಗಿ ಸ್ಮೃತಿ ಮಂಧಾನ ಅವರ ಅಭಿಮಾನಿ. ಈ ಪೋಸ್ಟ್ ಸ್ಮೃತಿ ಅವರಿಗೆ ತಲುಪುತ್ತದೆ ಎಂದು ಭಾವಿಸುತ್ತೇನೆ,” ಎಂದು ಬಾಲಕಿಯ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.

ಸ್ಮೃತಿ ನೀಡಿದ ಉತ್ತರವೇನು?
ಈ ಪೋಸ್ಟ್ ಗಮನಿಸಿದ ಸ್ಮೃತಿ ಮಂಧಾನ, “ದಯವಿಟ್ಟು ಅರು ಕಣಿವೆಯ ಆ ಪುಟ್ಟ ಚಾಂಪಿಯನ್‌ಗೆ ನನ್ನ ಕಡೆಯಿಂದ ಒಂದು ದೊಡ್ಡ ಅಪ್ಪುಗೆ (Big Hug) ನೀಡಿ. ನಾನೂ ಅವಳ ಪರವಾಗಿ ಚಿಯರ್ ಮಾಡುತ್ತೇನೆ ಎಂದು ಹೇಳಿ,” ಎಂದು ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮೃತಿ ಅವರ ಈ ಸರಳತೆ ಮತ್ತು ಅಭಿಮಾನ ನೆಟ್ಟಿಗರ ಮನಗೆದ್ದಿದೆ.
ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಮಂಧಾನ
ಇದೇ ವೇಳೆ, ಶ್ರೀಲಂಕಾ ವಿರುದ್ಧ ಇಂದಿನಿಂದ (ಡಿ. 21) ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಮೃತಿ ಮಂಧಾನ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರಿಗೆ ಕೇವಲ 18 ರನ್‌ಗಳ ಅವಶ್ಯಕತೆಯಿದೆ.
ಇದನ್ನೂ ಓದಿ; 2023ರ ವಿಶ್ವಕಪ್ ಸೋಲಿನ ನಂತರ ನಿವೃತ್ತಿ ಬಗ್ಗೆ ಯೋಚಿಸಿದ್ದೆ : ರೋಹಿತ್ ಶರ್ಮಾ ಸ್ಫೋಟಕ ಹೇಳಿಕೆ



















