ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಮನೆ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ವೈಯಾಲಿಕಾವಲ್ ನಿವಾಸದ ಮೇಲೆ ಎಸ್ ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈಗಾಗಲೇ ಶಾಸಕ ಮುನಿರತ್ನ ಮೂರು ಪ್ರಕರಣಗಳಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಜಾತಿ ನಿಂದನೆ, ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಮೂರೂ ಪ್ರಕರಣಗಳ ತನಿಖೆ ಈಗಾಗಲೇ ನಡೆಯುತ್ತಿದೆ. ಈ ಪ್ರಕರಣಗಳ ವಿಚಾರಣೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿರುವ ಎಸ್ ಐಟಿ ಅಧಿಕಾರಿಗಳು ವೈಯಾಲಿಕಾವಲ್ ನಿವಾಸ ಸೇರಿದಂತೆ ಒಟ್ಟು 15 ಪ್ರದೇಶಗಳಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಮೊದಲು ಮುನಿರತ್ನ ಅರೆಸ್ಟ್ ಆಗಿದ್ದರು. ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ, ಮರುದಿನವೇ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆಯುತ್ತಿದ್ದಂತೆ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಅಲ್ಲದೇ, ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಕೂಡ ಇದೆ.