ಬಾಲಿವುಡ್..ಹೇಳಿ ಕೇಳಿ ಗೆದ್ದಿತ್ತಿನ ಬಾಲ ಹಿಡಿದು ಮುನ್ನುಗ್ಗುವ ಸಮಯಸಾಧಕರ ಅಡ್ಡ. ಒಂದು ಕಾಲದಲ್ಲಿ ದಕ್ಷಿಣದ ಸಿನಿಮಾಗಳು ಅಂದರೆ ಮೂಗು ಮುರಿಯುತ್ತಿದ್ದವರು ಇವತ್ತು ಇಲ್ಲಿನ ಕತೆ, ನಿರ್ದೇಶಕ, ನಿರ್ಮಾಪಕ, ನಟರಿಗೆ ದುಂಬಾಲು ಬೀಳುವಂತಾಗಿದ್ದು ವಿಪರ್ಯಾಸ. ಖಾನ್ ಗಳ ದರ್ಬಾರ್ ನಲ್ಲಿ ನಾವಾಡಿದ್ದೇ ಸರಿ ಎನ್ನುವಂತಿದ್ದ ಬಾಲಿವುಡ್ ಇವತ್ತು ಹಲ್ಲಿಲ್ಲದ ಹಾವಿನಂತಾಗಿದೆ. ಅದರಲ್ಲಿಯೂ ಸಲ್ಮಾನ್ ಖಾನ್ ಎಂಬ 59 ವರ್ಷದ ಚಿರ ಯುವಕನನ್ನು ಸಿನಿ ಅಭಿಮಾನಿಗಳು ಸಾರಾಸಗಟ ತಿರಸ್ಕರಿಸಿದ್ದಾರೆ. ಇದಕ್ಕೆ ಉತ್ತಮ ನಿರ್ದಶನವೆಂದ್ರೆ ಸಿಕಂದರ್ ಸಿನಿಮಾ.
ಸಲ್ಲು ಫೋನ್ ಎತ್ತುತ್ತಿಲ್ಲ ಕರಣ್ ಜೋಹರ್!
ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಕಾಲ್ ಶೀಟ್ ಸಿಕ್ಕಿತು ಅಂದ್ರೆ ನಿರ್ಮಾಪಕ ಹಬ್ಬ ಮಾಡುತ್ತಿದ್ದ. ಕೋಟಿ ಕೋಟಿ ಬಾಚುತ್ತಿದ್ದ ಸಿನಿಮಾಗಳು ಮೊನ್ನೆಯ ಸಿಕಂದರ್ ನ ಹೀನಾತಿ ಹೀನ ಸೋಲಿನೊಂದಿಗೆ ಸಲ್ಮಾನ್ ಸ್ಟಾರ್ ಡಮ್ ನ ಸತ್ಯವನ್ನು ತೆರೆದಿಟ್ಟಿದೆ. ಸಿಕಂದರ್ ಅನ್ನೋ ಸಿನಿಮಾ ಯಾವಾಗ ಮಕಾಡೆ ಮಲಗಿತೋ ಸಲ್ಲು ಹಾಕಿಕೊಂಡು ಸಿನಿಮಾ ಮಾಡೋಕೆ ಯಾವೊಬ್ಬ ನಿರ್ಮಾಪಕ ಮುಂದೆ ಬರುತ್ತಿಲ್ಲ. ಮೊನ್ನೆ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಗೆ ಸುಲ್ತಾನ್ ಕರೆ ಮಾಡಿದ್ದರಂತೆ, ಬಟ್ ಕರಣ್ ಕಾಲ್ ಪಿಕ್ ಮಾಡಿಲ್ಲ. ಈ ಹಿಂದೆ ಇದೇ ಕರಣ್ ಜೊತೆ ದೌಲತ್ತು ಮೆರೆದಿದ್ದ ಭಾಯಿಜಾನ್, ಇಂದು ಗೋಗರೆಯುವ ಹಂತಕ್ಕೆ ಬಂದು ನಿಂತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಸಲ್ಮಾನ್ ನ ಅದೊಂದು ಷರತ್ತಿನಿಂದ ನಿಲ್ತಾ ಸಿನಿಮಾ!
ಅದು 2023. ಆಗಷ್ಟೇ ಕೋವಿಡ್ ಗುಂಗಿನಿಂದ ಹೊರ ಬಂದಿದ್ದ ಜಗತ್ತು ಹೊಸ ಹುರುಪಿನ ನಿರೀಕ್ಷೆಯಲ್ಲಿತ್ತು. ಬಾಲಿವುಡ್ ಗೂ ಒಂದು ಯಶಸ್ಸಿನ ಟಾನಿಕ್ ಬೇಕಿತ್ತು. ಹಾಗಾಗಿಯೇ ಕರಣ್ ಜೋಹರ್ ನ ಧರ್ಮಾ ಬ್ಯಾನರ್ ಬುಲ್ ಹೆಸರಲ್ಲಿ ಒಂದು ಸಿನಿಮಾಗೆ ಪ್ಲ್ಯಾನ್ ಮಾಡಿತ್ತು. ವಿಷ್ಣುವರ್ಧನ್ ಈ ಸಿನಿಮಾಗೆ ನಿರ್ದೇಶಕ. ಡಿಸೆಂಬರ್ ನಲ್ಲಿ ಸಿನಿಮಾ ಮುಹೂರ್ತ ನಡೆದಿತ್ತು. ಸಲ್ಮಾನ್ ಬುಲ್ ಅವತಾರದಲ್ಲಿ ಮಿಂಚುವುದು ನಿಶ್ಚಿತವಾಗಿತ್ತು. ಆದರೆ, ಸಲ್ಲು ಅವರ ಅದೊಂದು ಷರತ್ತು ಸಮಸ್ತ ಸಿನಿಮಾವನ್ನೇ ಡ್ರಾಪ್ ಔಟ್ ಮಾಡಿಸಿ ಬಿಟ್ಟಿತು.
ಬಾಡಿಗಾರ್ಡ್ ಮಗನಿಗೆ ಕೊಡಬೇಕಂತೆ ಚಾನ್ಸ್!
ಬುಲ್…ಪ್ಯಾರಾ ಮಿಲಿಟರ್ ಯೋಧನ ಕುರಿತಾದ ಭರ್ಜರಿ ಆಕ್ಷನ್ ಕತೆ ಹೊಂದಿತ್ತು. ಸಲ್ಮಾನ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾನನ್ನು ಕಣಕ್ಕಿಳಿಸಲು ಕರಣ್ ಯೋಚಿಸಿದ್ದರು. ಆದರೆ, ಸಲ್ಮಾನ್ ಮಾತ್ರ ತಮ್ಮ ಜೊತೆ ಈ ಸಿನಿಮಾದಲ್ಲಿ ತಮ್ಮ ಅಂಗರಕ್ಷಕ ಶೇರಾನ ಮಗ ಅಬೀರ್ ಅಕಾ ನಟಿಸಲಿ ಅಂತಾ ಪಟ್ಟು ಹಿಡಿದಿದ್ದರು. ಹೇಳಿ ಕೇಳಿ 250 ಕೋಟಿಯ ಮೆಗಾ ಬಜೆಟ್ ಸಿನಿಮಾ. ಈ ರಿಸ್ಕ್ ತೆಗೆದುಕೊಳ್ಳಲು ಒಪ್ಪದ ಕರಣ್ ಸಂಪೂರ್ಣ ಪ್ರೊಜೆಕ್ಟನ್ನೇ ಕೈಬಿಟ್ಟುಬಿಟ್ಟರು. ಆದರೀಗ ಇದೇ ಸಲ್ಲು ಕರಣ್ ಗೆ ದುಂಬಾಲು ಬಿದ್ದಿದ್ದು ಕರಿಯರ್ ಗೊಂದು ಬ್ರೇಕ್ ಕೊಡಿಸಪ್ಪಾ ಅಂತಾ ಅಂಗಲಾಚುತ್ತಿದ್ದಾರಂತೆ. ಅದಕ್ಕೇ ಹೇಳೋದು ಕಾಲ ಎಲ್ಲರ ಕಾಲೆಳೆಯುತ್ತೆ ಅಂತಾ.