ಲಂಡನ್: ಸುಮಾರು 50 ವರ್ಷಗಳಲ್ಲೇ ಅತಿ ದೊಡ್ಡ ಮತ್ತು ಕಠಿಣ ವಲಸೆ ನೀತಿ ಬದಲಾವಣೆಗಳಿಗೆ ಬ್ರಿಟನ್(ಯುಕೆ) ಸರ್ಕಾರ ಮುಂದಾಗಿದೆ. ಕೀರ್ ಸ್ಟಾರ್ಮರ್ ನೇತೃತ್ವದ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ನೂತನ ನಿಯಮಗಳ ಪ್ರಕಾರ, ವಲಸಿಗರು ಬ್ರಿಟನ್‌ನಲ್ಲಿ ಕಾಯಂ ಆಗಿ ನೆಲೆಸಲು (Permanent Settlement) ಅರ್ಜಿ ಸಲ್ಲಿಸುವ ಮುನ್ನ ಸುಮಾರು 20 ವರ್ಷಗಳ ಕಾಲ ಕಾಯಬೇಕಾಗಬಹುದು. ಈ ನಿರ್ಧಾರವು ಯುಕೆಯಲ್ಲಿರುವ ಅತಿದೊಡ್ಡ ವಲಸಿಗ ಸಮುದಾಯವಾದ ಭಾರತೀಯರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.
ಹೊಸ ನೀತಿಯು ಆರ್ಥಿಕವಾಗಿ ಸಬಲರಾದವರಿಗೆ ಮತ್ತು ನಿಯಮಗಳನ್ನು ಪಾಲಿಸುವವರಿಗೆ ಆದ್ಯತೆ ನೀಡುವ ಗುರಿ ಹೊಂದಿದೆ ಎಂದು ಬ್ರಿಟನ್ ಗೃಹ ಸಚಿವರಾದ ಶಬಾನಾ ಮಹಮೂದ್ ತಿಳಿಸಿದ್ದಾರೆ. ಹೊಸ ಪ್ರಸ್ತಾವನೆಯ ಮುಖ್ಯಾಂಶಗಳು ಹೀಗಿವೆ:
ದೀರ್ಘ ಕಾಯುವಿಕೆ: ಸಾಮಾನ್ಯ ವಲಸಿಗರು ಕಾಯಂ ವಸತಿಗಾಗಿ 10 ರಿಂದ 20 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಕಡಿಮೆ ವೇತನದ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಕನಿಷ್ಠ 15 ವರ್ಷಗಳ ಕಾಲ ಕಾಯಬೇಕಾಗಬಹುದು.
ವೈದ್ಯರಿಗೆ ರಿಯಾಯಿತಿ: ಎನ್‌ಎಚ್‌ಎಸ್ (NHS) ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳಿಗೆ ಮಾತ್ರ 5 ವರ್ಷಗಳ ನಂತರ ಕಾಯಂ ವಸತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದು ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಕೊಂಚ ನಿರಾಳ ತರುವ ವಿಷಯವಾಗಿದೆ.
ಶ್ರೀಮಂತರಿಗೆ ತ್ವರಿತ ದಾರಿ: ಅತ್ಯುತ್ತಮ ಪ್ರತಿಭೆಗಳು ಮತ್ತು ಹೆಚ್ಚಿನ ಆದಾಯ ಗಳಿಸುವವರು (High Earners) ಕೇವಲ 3 ವರ್ಷಗಳಲ್ಲಿ ಕಾಯಂ ವಸತಿಗೆ ಅರ್ಹರಾಗುವ ‘ಫಾಸ್ಟ್ ಟ್ರ್ಯಾಕ್’ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.
ಭಾರತೀಯ ವಲಸಿಗರ ಮೇಲಾಗುವ ಪರಿಣಾಮ
ಬ್ರಿಟನ್‌ನಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದು, ಇವರೇ ಅತಿದೊಡ್ಡ ನುರಿತ ವಲಸಿಗ ಸಮುದಾಯವಾಗಿದ್ದಾರೆ. 2030ರ ವೇಳೆಗೆ ಸುಮಾರು 16 ಲಕ್ಷ ವಲಸಿಗರು ಕಾಯಂ ವಸತಿಗೆ ಅರ್ಹರಾಗಲಿದ್ದಾರೆ. ಆದರೆ ಹೊಸ ನಿಯಮಗಳು ಜಾರಿಯಾದರೆ, ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದ್ದು, ಅನಿಶ್ಚಿತತೆ ಹೆಚ್ಚಾಗಲಿದೆ.
ಕಲ್ಯಾಣ ಸೌಲಭ್ಯಗಳು ಮತ್ತು ಸಾಮಾಜಿಕ ವಸತಿ ಸೌಲಭ್ಯಗಳನ್ನು ಪಡೆಯಲು ವಲಸಿಗರು ಕಾಯಂ ಪೌರತ್ವ ಪಡೆಯುವುದನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಉಳಿಯುವವರು ಮತ್ತು ನಿಯಮ ಉಲ್ಲಂಘಿಸುವವರು ಇನ್ಮುಂದೆ 30 ವರ್ಷಗಳ ಕಾಲ ಕಾಯಂ ವಸತಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಸರ್ಕಾರದ ಸಮರ್ಥನೆ
ಈ ಬದಲಾವಣೆಗಳು ಬ್ರಿಟನ್‌ನ ಸಾರ್ವಜನಿಕ ಸೇವೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಲಸೆ ವ್ಯವಸ್ಥೆಯನ್ನು ಹೆಚ್ಚು ನ್ಯಾಯಯುತವಾಗಿಸಲು ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. “ದೇಶದಲ್ಲಿ ಶಾಶ್ವತವಾಗಿ ನೆಲೆಸುವುದು ಹಕ್ಕಲ್ಲ, ಅದೊಂದು ವಿಶೇಷ ಸವಲತ್ತು. ಅದನ್ನು ಗಳಿಸಿಕೊಳ್ಳಬೇಕು,” ಎಂದು ಶಬಾನಾ ಮಹಮೂದ್ ಹೇಳಿದ್ದಾರೆ. ಈ ಪ್ರಸ್ತಾಪಗಳು ಪ್ರಸ್ತುತ 12 ವಾರಗಳ ಸಮಾಲೋಚನಾ ಹಂತದಲ್ಲಿದ್ದು, ಮುಂದಿನ ಏಪ್ರಿಲ್ ವೇಳೆಗೆ ಜಾರಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕಲ್ಲಿದ್ದಲು ಮಾಫಿಯಾ ವಿರುದ್ಧ ಇ.ಡಿ. ಸಮರ : 2 ರಾಜ್ಯ, 42 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ



















