ಬೆಂಗಳೂರು : ಸಿಎಂ ಕೊಪ್ಪಳಕ್ಕೆ ಹೋಗಿದ್ದಾರೆ, ಕೊಪ್ಪಳದಿಂದ ಬಂದ ಮೇಲೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸಮೀಕ್ಷೆಯ ಜಿಲ್ಲಾವಾರು ಅಂಕಿ ಅಂಶ ಪಡೆದುಕೊಂಡು ಮತ್ತೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಣ್ಣಪುಟ್ಟ ಗೊಂದಲಗಳು ಆಗುವುದು ಸಹಜ, ಎಲ್ಲರೂ ಸಹಕರಿಸಿದರೆ ಸರಿಯಾಗಿ ನಡೆಯುತ್ತದೆ. ಇದುವರೆಗೆ ಶೇ. ಶೇ. 80ರಷ್ಟು ಸಮೀಕ್ಷೆ ಆಗಿದೆ, ಇನ್ನೂ ಶೇ. 20ರಷ್ಟು ಆದರೆ ಮುಗಿಯುತ್ತದೆ. ಇನ್ನೊಂದೆರಡು ದಿನ ವಿಸ್ತರಣೆ ಮಾಡಿದರೆ ಮುಗಿಯಬಹುದು ಎಂದು ತಿಳಿಸಿದ್ದಾರೆ.
ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿ, ತಾವೇ ಐದು ವರ್ಷ ಸಿಎಂ ಆಗಿ ಇರುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮಾತನಾಡುವವರು ಮಾತನಾಡಿಕೊಳ್ಳಲ್ಲಿ, ಸಿಎಂಗೆ ಏನು ಜವಾಬ್ದಾರಿ ಇಲ್ಲವೇ? ಎಂದು ಸಿಎಂ ಪರ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು, ಇದೇ ಸಂಧರ್ಭದಲ್ಲಿ ಧರ್ಮಸ್ಥಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಧರ್ಮಸ್ಥಳ ಪ್ರಕರಣಗಳ ವರದಿಯನ್ನು ಬೇಗ ಕೊಡಲು ಸೂಚಿಸಲಾಗಿದೆ. ತನಿಖೆ ನಡೆಯುತ್ತಿದೆ, ಬೇರೆ ಬೇರೆ ಅನಾಲಿಸಿಸ್ ಆಗುತ್ತಿರುವುದರಿಂದ ಸಮಯ ಹಿಡಿಯುತ್ತದೆ. ತನಿಖೆ ಹೀಗೇ ಮಾಡಿ ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ. ಈಗಲೇ ವರದಿ ಕೊಡಿ ಎಂದು ಒತ್ತಡ ಹಾಕುವುದಕ್ಕೆ ಆಗುವುದಿಲ್ಲ. ಎಫ್ಎಸ್‌ಎಲ್ ವರದಿಯೂ ಬರಬೇಕು, ಎಸ್ಐಟಿ ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ವರದಿ ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ವಿಚಾರವಾಗಿ ಮಾತನಾಡಿ, ಈ ಕುರಿತು ಬೇರೆ ರಾಜ್ಯಗಳಲ್ಲಿ ಎಷ್ಟೆಷ್ಟು ವಯೋಮಿತಿ ಇದೆ ಎಂಬ ವರದಿಯನ್ನು ತರಿಸಿಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಪೊಲೀಸ್ ಹುದ್ದೆಗಳಿಗೆ ಶಾಶ್ವತ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಹೇಳಿದ್ದಾರೆ.