ಜೋಹಾನ್ಸ್‌ಬರ್ಗ್ : ಬಾರ್ನಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಇಂದು ನಸುಕಿನಜಾವ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದೆ.
ನಗರದ ನೈಋತ್ಯ ದಿಕ್ಕಿನಲ್ಲಿ 40 ಕಿಲೋಮೀಟರ್ (25 ಮೈಲಿ) ದೂರದಲ್ಲಿರುವ ಚಿನ್ನದ ಗಣಿಗಾರಿಕೆ ಪ್ರದೇಶದ ಬೆಕರ್ಸ್‌ಡಾಲ್‌ನಲ್ಲಿರುವ ಬಾರ್ನಲ್ಲಿ ಸುಮಾರು ಒಂದು ಡಜನ್ ಜನರು ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ 9 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾಹನಗಳಲ್ಲಿ ಬಂದ ದಾಳಿಕೋರರು, ಬಾರ್ನಲ್ಲಿರುವವರ ಮೇಲೆ ಗುಂಡು ಹಾರಿಸಿದ್ದಲ್ಲದೇ ಸ್ಥಳದಿಂದ ಪರಾರಿಯಾಗುವಾಗ ಕೂಡ ಗುಂಡು ಹಾರಿಸುತ್ತಿದ್ದರು. ಮೃತರಲ್ಲಿ ಬಾರ್‌ನ ಹೊರಗೆ ಇದ್ದ ಚಾಲಕನೂ ಸೇರಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಆಯುಕ್ತ ಮೇಜರ್ ಜನರಲ್ ಫ್ರೆಡ್ ಕೆಕಾನಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿ ಬಳಿಕ ದಾಳಿಕೋರರು ಪರಾರಿಯಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಆನೇಕಲ್‌ನಲ್ಲಿ ಭೀಕರ ಸರಣಿ ಅಪಘಾತ | 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಕಂಟೈನರ್ ; ಐವರ ಸ್ಥಿತಿ ಗಂಭೀರ!



















