ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿ ಬಿಟ್ಟಿದೆ. ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಅತ್ಯಾಚಾರ ವಿಷಯದಲ್ಲಿ ಅಂಕಿ- ಅಂಶವೊಂದು ಬಿಡುಗಡೆಯಾಗಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತಿದೆ.
ಅಂಕಿ -ಅಂಶದ ಮಾಹಿತಿಯಂತೆ, ದೇಶದಲ್ಲಿ ಸರಾಸರಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ (Physical Abuse) ಎನ್ನುವ ವಿಚಾರ ಬಹಿರಂಗವಾಗಿದೆ. 2017 ಮತ್ತು 2022ರ ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ಸುಮಾರು 86 ಅತ್ಯಾಚಾರ ಪ್ರಕರಣ ದಾಖಲಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ಪರಿಚಿತರೇ ದೌರ್ಜನ್ಯ ನಡೆಸಿರುವುದು ಆಘಾತದ ವಿಷಯವಾಗಿದೆ.
ನಾಲ್ಕು ಅತ್ಯಾಚಾರ ಪ್ರಕರಣಗಳ ಪೈಕಿ ಮೂರರಲ್ಲಿ ಪರಿಚಿತ ವ್ಯಕ್ತಿಯೇ ದೌರ್ಜನ್ಯ ಎಸಗಿರುವುದು ಬಹಿರಂಗವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau-NCRB)ದ ವಾರ್ಷಿಕ ವರದಿಯಂತೆ 2017 ಮತ್ತು 2022ರ ನಡುವೆ ಭಾರತದಲ್ಲಿ ಒಟ್ಟು 1.89 ಲಕ್ಷ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಕನಿಷ್ಠ 1.79 ಲಕ್ಷ ಪ್ರಕರಣಗಳಲ್ಲಿ ಅತ್ಯಾಚಾರಿ ಪರಿಚಿತ ವ್ಯಕ್ತಿ ಆಗಿದ್ದರೆ, 9,670 ಪ್ರಕರಣಗಳಲ್ಲಿ ಸಂತ್ರಸ್ತೆಗೆ ಅತ್ಯಾಚಾರಿಯ ಕುರಿತು ಮಾಹಿತಿ ಇಲ್ಲ.
ಸಂತ್ರಸ್ತರು 18ರಿಂದ 30 ವರ್ಷದೊಳಗಿನವರು ಹೆಚ್ಚಿದ್ದಾರೆ. 1.89 ಲಕ್ಷ ಸಂತ್ರಸ್ತೆಯರ ಪೈಕಿ ಈ ವಯೋಮಾನದವರ ಸಂಖ್ಯೆ 1.13 ಲಕ್ಷ ಇದೆ. ಪ್ರತಿದಿನ ದಾಖಲಾಗುವ 86 ಪ್ರಕರಣಗಳಲ್ಲಿ 52 ಜನ ಸಂತ್ರಸ್ತರು 18ರಿಂದ 30 ವರ್ಷದೊಳಗಿನವರು.
ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಬಹಳ ಕಡಿಮೆಯಾದರೂ ಈ ಅಂಕಿ-ಅಂಶಗಳೂ ಗಾಬರಿ ತರಿಸುತ್ತವೆ. ಪ್ರತಿದಿನ ಸರಾಸರಿ ಓರ್ವ ಮಹಿಳೆ ಉದ್ಯೋಗದ ಸ್ಥಳ ಅಥವಾ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವುದು ಆಘಾತ ತಂದಿದೆ.
2014-2022ರ ಅವಧಿಯಲ್ಲಿ ಉದ್ಯೋಗದ ಸ್ಥಳಗಳಲ್ಲಿ ಕನಿಷ್ಠ 4,231 ಲೈಂಗಿಕ ದೌರ್ಜನ್ಯ ಪ್ರಕರಗಳು ವರದಿಯಾಗಿವೆ. 2017ರ ನಂತರ ಪ್ರತಿ ವರ್ಷ 400ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. 2014, 2015 ಮತ್ತು 2016ರಲ್ಲಿ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ 1,795 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮಹಿಳೆಗೆ ಕೆಲಸದ ಸ್ಥಳ, ಸೇರಿದಂತೆ ಓಡಾಡುವ ಸ್ಥಳಗಳಲ್ಲಿಯೂ ಸುರಕ್ಷತೆ ಇಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಗೆ ಸುರಕ್ಷತೆ ಕಲ್ಪಿಸಬೇಕಾದ ಅಗತ್ಯತೆ ಇದೆ.