ನವದೆಹಲಿ : ದೇಶಾದ್ಯಂತ ಅಡುಗೆ ಅನಿಲದ ಬಳಕೆಯ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳನ್ನು ಪರಿಷ್ಕರಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಎರಡು ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಒಂದು ಸಿಲಿಂಡರ್ ಪಡೆದ 35 ದಿನಗಳ ನಂತರವಷ್ಟೇ ಮತ್ತೊಂದು ಬುಕಿಂಗ್ ಮಾಡಲು ಅವಕಾಶವಿರುತ್ತದೆ.
ಉಜ್ವಲ ಫಲಾನುಭವಿಗಳಿಗೆ 45 ದಿನಗಳ ಕಾಯುವಿಕೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ (PMUY) ಅಡಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಈ ನಿಯಮ ಮತ್ತಷ್ಟು ಕಠಿಣವಾಗಿದೆ. ಈ ಹಿಂದೆ ಇದ್ದ ಕಾಯುವ ಅವಧಿಯನ್ನು 20 ದಿನಗಳಷ್ಟು ಹೆಚ್ಚಿಸಲಾಗಿದ್ದು, ಉಜ್ವಲ ಗ್ರಾಹಕರು ಈಗ ಒಂದು ಸಿಲಿಂಡರ್ ಪಡೆದ ನಂತರ ಕನಿಷ್ಠ 45 ದಿನಗಳ ಕಾಲ ಮುಂದಿನ ಬುಕಿಂಗ್‌ಗಾಗಿ ಕಾಯಬೇಕಾಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಈ ಅವಧಿಯನ್ನು 25 ದಿನಗಳಿಂದ 35 ದಿನಗಳಿಗೆ ಏರಿಸಲಾಗಿದೆ. ಮಾರ್ಚ್ 7ರಿಂದಲೇ ಜಾರಿಗೆ ಬಂದಿರುವ ಈ ಹೊಸ ವ್ಯವಸ್ಥೆಯು ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ತಡೆಯುವ ಉದ್ದೇಶ ಹೊಂದಿದೆ.
ಒಟಿಪಿ ಇಲ್ಲದೆ ಸಿಗಲ್ಲ ಸಿಲಿಂಡರ್
ಕೇವಲ ಬುಕಿಂಗ್ ಅವಧಿಯಷ್ಟೇ ಅಲ್ಲದೆ, ಸಿಲಿಂಡರ್ ವಿತರಣಾ ಪದ್ಧತಿಯಲ್ಲೂ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಸಿಲಿಂಡರ್ ಮನೆ ಬಾಗಿಲಿಗೆ ಬಂದಾಗ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ಅಥವಾ ಓಟಿಪಿಯನ್ನು ವಿತರಣಾ ಸಿಬ್ಬಂದಿಗೆ ನೀಡಲೇಬೇಕು. ಈ ಕೋಡ್ ಇಲ್ಲದೆ ಸಿಲಿಂಡರ್ ಹಸ್ತಾಂತರಿಸಲು ಅವಕಾಶವಿರುವುದಿಲ್ಲ. ನಕಲಿ ವಿತರಣೆಗಳನ್ನು ತಡೆಯಲು ಮತ್ತು ಅರ್ಹ ಗ್ರಾಹಕರಿಗೇ ಅನಿಲ ತಲುಪುವಂತೆ ಮಾಡಲು ಈ ‘ಡಿಎಸಿ’ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
ಒಬ್ಬ ಗ್ರಾಹಕ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 15 ಸಬ್ಸಿಡಿ ಸಹಿತ ಸಿಲಿಂಡರ್‌ಗಳನ್ನು ಪಡೆಯಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಸಿಲಿಂಡರ್ ಬೇಕಾದಲ್ಲಿ ಗ್ಯಾಸ್ ಏಜೆನ್ಸಿಗೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಲು 7715012345 ಅಥವಾ 7718012345 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಎಸ್‌ಎಂಎಸ್ ಕಳುಹಿಸಬಹುದು. ಬಿಪಿಸಿಎಲ್ ಗ್ರಾಹಕರು 1800224344 ಸಂಖ್ಯೆಯ ಮೂಲಕ ವಾಟ್ಸ್ ಆ್ಯಪ್ ಬುಕಿಂಗ್ ಕೂಡ ಮಾಡಬಹುದಾಗಿದೆ. ಅನಿಲ ಸೋರಿಕೆ ಅಥವಾ ತುರ್ತು ಸಂದರ್ಭಗಳಿಗಾಗಿ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1906 ಸದಾ ಲಭ್ಯವಿರುತ್ತದೆ.
ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್ ಮಾರಾಟದ ವರದಿಗಳ ಬೆನ್ನಲ್ಲೇ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ!



















