ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಗೆ ಬರುವಂತೆ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮನವಿ ಮಾಡಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ್ ಆತಿಥ್ಯ ವಹಿಸುತ್ತಿದೆ. ಈ ಟೂರ್ನಿ ಪಾಕಿಸ್ತಾನದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆಯೇ? ಎಂಬ ಚರ್ಚೆ ಈಗ ಶುರುವಾಗಿದೆ. ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಭಾರತ ಸರ್ಕಾರ ಇದಕ್ಕೆ ಅನುಮತಿ ನೀಡುವ ಸಾಧ್ಯತೆಗಳಿಲ್ಲ. ಇತ್ತ ತನ್ನ ಪಟ್ಟು ಬಿಡದಿರುವ ಪಾಕ್ ಕ್ರಿಕೆಟ್ ಮಂಡಳಿ, ಟೀಂ ಇಂಡಿಯಾ ನಮ್ಮ ದೇಶಕ್ಕೆ ಬರದೆ ಬೇರೆ ದಾರಿಯೇ ಇಲ್ಲ ಎನ್ನುತ್ತಿದೆ. ಸದ್ಯ ಮಾಜಿ ಪಾಕ್ ಕ್ರಿಕೆಟಿಗರು, ಭಾರತ ಬರದಿದ್ದರೂ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತದೆ ಎಂದಿದ್ದಾರೆ. ಈ ಮಧ್ಯೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಎರಡೂ ದೇಶಗಳ ಮಧ್ಯೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದು ಪ್ರತ್ಯೇಕ ಸಮಸ್ಯೆ. ಅದನ್ನು ಪ್ರತ್ಯೇಕವಾಗಿಯೇ ಪರಿಹರಿಸಿಕೊಳ್ಳಬೇಕು. ಕ್ರೀಡೆಯಲ್ಲಿ ರಾಜಕೀಯ ಬೆರೆಯಬಾರದು. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತಕ್ಕೆ ತೆರಳಿದ್ದು, ಇದೀಗ ಭಾರತ ತಂಡಕ್ಕೂ ಇದೊಂದು ಉತ್ತಮ ಅವಕಾಶ. ನಾವು ತುಂಬಾ ಒಳ್ಳೆಯ ಜನ, ಅತಿಥಿಗಳಿಗೆ ಆತಿಥ್ಯ ನೀಡುವುದು ಹೇಗೆ ಎಂಬುವುದು ಗೊತ್ತು ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿಯಂತೆ ಶ್ರೀಲಂಕಾದಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಚರ್ಚಿಸಲಾಗಿಲ್ಲ. ಈ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಯಾರಿಯಲ್ಲಿ ನಿರತವಾಗಿದೆ. ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಬರುವಂತೆ ಮನವೊಲಿಸುವ ಕೆಲಸವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಬಿಟ್ಟಿದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬಂದರೆ ಭದ್ರತಾ ಕಾರಣಗಳಿಂದಾಗಿ ಲಾಹೋರ್‌ನಲ್ಲಿ ಮಾತ್ರ ಎಲ್ಲಾ ಪಂದ್ಯಗಳನ್ನು ನಡೆಸಲಾಗುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಭಾರತ ಸೆಮಿಫೈನಲ್ ಮತ್ತು ಫೈನಲ್ ತಲುಪಿದರೂ ಭಾರತದ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ. ಭಾರತ-ಪಾಕಿಸ್ತಾನ ಪಂದ್ಯವನ್ನು ಮಾರ್ಚ್ 1 ರಂದು ನಡೆಸಲು ಪ್ರಸ್ತಾಪಿಸಲಾಗಿದೆ. ಆದರೆ, ಎಲ್ಲ ನಿರ್ಧಾರವೂ ಭಾರತ ಸರ್ಕಾರದ ಮೇಲೆ ನಿಂತಿದ್ದು, ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.