ಬ್ಯಾಂಕಾಕ್ : ಲೈಂಗಿಕ ಸಂಬಂಧ, ರಹಸ್ಯ ವಿಡಿಯೊಗಳು ಮತ್ತು ಕೋಟ್ಯಂತರ ರೂಪಾಯಿ ಹಣದ ಸುಲಿಗೆ… ಥಾಯ್ಲೆಂಡ್‌ನಲ್ಲಿ ‘ಮಿಸ್ ಗಾಲ್ಫ್’ ಎಂದು ಗುರುತಿಸಿಕೊಂಡಿರುವ ಮಹಿಳೆಯೊಬ್ಬಳು ಕನಿಷ್ಠ ಒಂಬತ್ತು ಬೌದ್ಧ ಭಿಕ್ಷುಗಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡು, ಆ ಫೋಟೋ ಮತ್ತು ವಿಡಿಯೊಗಳನ್ನು ಬಳಸಿ ಅವರಿಂದ ಲಕ್ಷಾಂತರ ಹಣ ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಗರಣವು ಥಾಯ್ ಬೌದ್ಧ ಸಂಸ್ಥೆಯನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.
ಥಾಯ್ಲೆಂಡ್ ಪೊಲೀಸರು ‘ಮಿಸ್ ಗಾಲ್ಫ್’ ಎಂದು ಗುರುತಿಸಲ್ಪಟ್ಟಿರುವ ಮಹಿಳೆಯೊಬ್ಬಳನ್ನು ಬಂಧಿಸಿದ್ದು, ಆಕೆ ಹಲವಾರು ಬೌದ್ಧ ಭಿಕ್ಷುಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ನಂತರ ಅವರ ಅಶ್ಲೀಲ ಫೋಟೋ ಮತ್ತು ವಿಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಜುಲೈ 15 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು, ‘ಮಿಸ್ ಗಾಲ್ಫ್’ ಕನಿಷ್ಠ ಒಂಬತ್ತು ಭಿಕ್ಷುಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆಕೆ ಸುಮಾರು 385 ಮಿಲಿಯನ್ ಬಾಟ್ ($11.9 ಮಿಲಿಯನ್) ಪಡೆದಿದ್ದಾಳೆ ಎಂದು ಅಂದಾಜಿಸಲಾಗಿದೆ.
ಥಾಯ್ಲೆಂಡ್‌ನ ಅತ್ಯಂತ ಗೌರವಾನ್ವಿತ ಬೌದ್ಧ ಸಂಸ್ಥೆಗೆ ಇತ್ತೀಚಿನ ವರ್ಷಗಳಲ್ಲಿ ಇದು ಅತಿದೊಡ್ಡ ಆಘಾತವಾಗಿದೆ. ಇತ್ತೀಚಿನ ದಿನಗಳಲ್ಲಿ ಭಿಕ್ಷುಗಳು ಲೈಂಗಿಕ ಅಪರಾಧಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಸಂಸ್ಥೆಯನ್ನು ಕಾಡುತ್ತಿವೆ.
ಪೊಲೀಸ್ ವಕ್ತಾರರೊಬ್ಬರು ‘ದಿ ಗಾರ್ಡಿಯನ್’ ವರದಿಯ ಪ್ರಕಾರ, ‘ಮಿಸ್ ಗಾಲ್ಫ್’ ಮನೆಯನ್ನು ಶೋಧಿಸಿದ ತನಿಖಾಧಿಕಾರಿಗಳು, ಭಿಕ್ಷುಗಳನ್ನು ಬ್ಲಾಕ್‌ಮೇಲ್ ಮಾಡಲು ಬಳಸಿದ 80,000 ಕ್ಕೂ ಹೆಚ್ಚು ಫೋಟೋಗಳು ಮತ್ತು ವಿಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ. “ನಾವು ಆಕೆಯ ಹಣಕಾಸಿನ ವಹಿವಾಟನ್ನು ಪರಿಶೀಲಿಸಿದ್ದೇವೆ ಮತ್ತು ಅದು ಅನೇಕ ದೇವಾಲಯಗಳನ್ನು ಒಳಗೊಂಡಿದೆ ಎಂದು ಕಂಡುಬಂದಿದೆ” ಎಂದು ಥಾಯ್ ಪೊಲೀಸರ ಕೇಂದ್ರ ತನಿಖಾ ಬ್ಯೂರೋದ ಜರೂನ್‌ಕಿಯಟ್ ಪಾಂಕಾಲ್ ಜುಲೈ 15 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ನಾವು ಆಕೆಯ ಮೊಬೈಲ್ ಅನ್ನು ವಶಪಡಿಸಿಕೊಂಡ ನಂತರ, ಹಲವಾರು ಭಿಕ್ಷುಗಳು, ಮತ್ತು ಹಲವಾರು ಕ್ಲಿಪ್‌ಗಳು ಮತ್ತು ಲೈನ್ ಚಾಟ್‌ಗಳು ಇದರಲ್ಲಿರುವುದು ಕಂಡುಬಂದಿದೆ” ಎಂದು ಅವರು ಸೇರಿಸಿದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಜೂನ್ ಮಧ್ಯಭಾಗದಲ್ಲಿ ಬ್ಯಾಂಕಾಕ್‌ನಲ್ಲಿನ ಬಿಕ್ಕುವೊಬ್ಬರು ಮಹಿಳೆಯೊಬ್ಬರಿಂದ ಸುಲಿಗೆಗೊಳಗಾದ ನಂತರ ಹಠಾತ್ತಾಗಿ ಸನ್ಯಾಸ ತ್ಯಜಿಸಿದ್ದಾರೆ ಎಂಬ ಮಾಹಿತಿ ಪೊಲೀಸರ ಗಮನಕ್ಕೆ ಬಂದಿತ್ತು . ‘ಮಿಸ್ ಗಾಲ್ಫ್’ ಮೇ 2024 ರಲ್ಲಿ ಆ ಭಿಕ್ಷುವಿನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ನಂತರ ತನಗೆ ಮಗುವಾಗಿದೆ ಎಂದು ಹೇಳಿ ಏಳು ಮಿಲಿಯನ್ ಬಾಟ್‌ಗಿಂತ ಹೆಚ್ಚು ಮಕ್ಕಳ ಪೋಷಣೆಗಾಗಿ ಬೇಡಿಕೆ ಇಟ್ಟಿದ್ದಳು. ನಂತರ, ಇತರ ಭಿಕ್ಷುಗಳು ಸಹ ‘ಮಿಸ್ ಗಾಲ್ಫ್’ ಗೆ ಹಣ ವರ್ಗಾಯಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತು. ಇದನ್ನು ಪೊಲೀಸರು ಆಕೆಯ “ಕಾರ್ಯ ವಿಧಾನ” ಎಂದು ಕರೆದಿದ್ದಾರೆ.
ಪೊಲೀಸರು, ಬಹುತೇಕ ಎಲ್ಲಾ ಹಣವನ್ನು ವಶಪಡಿಸಲಾಗಿದೆ ಆದಾಗ್ಯೂ ಅದರಲ್ಲಿ ಸ್ವಲ್ಪ ಆನ್‌ಲೈನ್ ಜೂಜಾಟಕ್ಕೆ ಬಳಸಲಾಗಿದೆ ಎಂದು ಕಂಡುಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ತನಿಖಾಧಿಕಾರಿಗಳು ‘ಮಿಸ್ ಗಾಲ್ಫ್’ ಮನೆಯನ್ನು ಶೋಧಿಸಿದಾಗ, ಆಕೆಯ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಭಿಕ್ಷುಗಳನ್ನು ಬ್ಲಾಕ್‌ಮೇಲ್ ಮಾಡಲು ಆಕೆ ಬಳಸಿದ್ದ 80,000 ಕ್ಕೂ ಹೆಚ್ಚು ಫೋಟೋಗಳು ಮತ್ತು ವಿಡಿಯೊಗಳನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ವಿರುದ್ಧ ಸುಲಿಗೆ, ಅಕ್ರಮ ಹಣ ವರ್ಗಾವಣೆ ಮತ್ತು ಕಳ್ಳತನದ ವಸ್ತುಗಳನ್ನು ಸ್ವೀಕರಿಸಿದ ಸೇರಿದಂತೆ ಹಲವಾರು ಆರೋಪಗಳನ್ನು ದಾಖಲಿಸಲಾಗಿದೆ. “ದುರ್ನಡತೆಯ ಭಿಕ್ಷುಗಳ” ಬಗ್ಗೆ ವರದಿ ಮಾಡಲು ಪೊಲೀಸರು ಹಾಟ್‌ಲೈನ್ ಅನ್ನು ಸಹ ತೆರೆದಿದ್ದಾರೆ.
ಕಠಿಣ ಶಿಕ್ಷೆಗೆ ಆಗ್ರಹ: ನಿಯಮಾವಳಿಗಳ ಪರಿಶೀಲನೆಗೆ ಸಮಿತಿ
ಈ ಹಗರಣವು ಥಾಯ್ ಬೌದ್ಧ ಧರ್ಮದ ಆಡಳಿತ ಮಂಡಳಿಯಾದ ಸಂಘಕ್ಕೆ ಮುಜುಗರ ತಂದಿದೆ. ಬಿಕ್ಕುಗಳ ನಿಯಂತ್ರಣಕ್ಕೆ ಸುಪ್ರೀಂ ಕೌನ್ಸಿಲ್ ಸ್ಥಾಪಿಸಿ ಸನ್ಯಾಸಿ ನಿಯಮಾವಳಿಗಳನ್ನು ಪರಿಶೀಲಿಸಲು ವಿಶೇಷ ಸಮಿತಿ ರಚಿಸುವುದಾಗಿ ಹೇಳಿದೆ. ಭಿಕ್ಷುಗಳ ನೀತಿ ಸಂಹಿತೆ ಉಲ್ಲಂಘಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಕಠಿಣ ದಂಡಗಳನ್ನು ವಿಧಿಸಲು ಮುಂದಾಗಿದೆ.
ಈ ವಾರ, ಥಾಯ್ ರಾಜ ವಜ್ರಾಲಂಕರ್ ಅವರು ಜೂನ್‌ನಲ್ಲಿ 81 ಭಿಕ್ಷುಗಳಿಗೆ ನೀಡಿದ್ದ ಉನ್ನತ ಪದವಿಗಳನ್ನು ರದ್ದುಗೊಳಿಸಿದ್ದಾರೆ. ಇತ್ತೀಚಿನ ದುರ್ನಡತೆ ಪ್ರಕರಣಗಳನ್ನು ಅವರು ಉಲ್ಲೇಖಿಸಿದ್ದು, ಇದು “ಬೌದ್ಧರಿಗೆ ಮನಸ್ಸಿನಲ್ಲಿ ಅಪಾರ ದುಃಖವನ್ನುಂಟುಮಾಡಿದೆ” ಎಂದು ಹೇಳಿದ್ದಾರೆ. ಥಾಯ್ಲೆಂಡ್‌ನಲ್ಲಿ, 90% ಕ್ಕಿಂತ ಹೆಚ್ಚು ಜನರು ಬೌದ್ಧರು ಎಂದು ಗುರುತಿಸಿಕೊಂಡಿದ್ದಾರೆ, ಅದರಲ್ಲಿಯೂ ಭಿಕ್ಷುಗಳನ್ನು ಹೆಚ್ಚು ಗೌರವಿಸಲಾಗುತ್ತದೆ.
ಆದರೆ ಬೌದ್ಧ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಹಗರಣಗಳಿಂದ ಬೇಸತ್ತಿದೆ. 2017 ರಲ್ಲಿ, ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ವಿರಾಪೋಲ್ ಸುಖ್‌ಫಾಲ್ ಎಂಬ ಭಿಕ್ಷು ಲೈಂಗಿಕ ಅಪರಾಧಗಳು, ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪಗಳನ್ನು ಎದುರಿಸಿದಾಗ ಅಂತರಾಷ್ಟ್ರೀಯ ಗಮನ ಸೆಳೆದಿದ್ದರು. ಮತ್ತು 2022 ರಲ್ಲಿ, ಉತ್ತರ ಪ್ರಾಂತ್ಯದ ಪೆಟ್‌ಚಾಬುನ್‌ನಲ್ಲಿರುವ ಒಂದು ದೇವಾಲಯದಲ್ಲಿನ ಎಲ್ಲಾ ನಾಲ್ಕು ಭಿಕ್ಷುಗಳನ್ನು ಮಾದಕವಸ್ತು ದಾಳಿಯಲ್ಲಿ ಬಂಧಿಸಲಾಯಿತು ಮತ್ತು ಅವರ ಭಿಕ್ಷುತ್ವವನ್ನು ರದ್ದುಪಡಿಸಲಾಗಿತ್ತು.



















