ಅಟ್ಟಾರಿ-ವಾಘಾ ಗಡಿ: ಗುರುನಾನಕ್ ದೇವ್ ಜಯಂತಿಯಲ್ಲಿ ಪಾಲ್ಗೊಳ್ಳಲು ಸಿಖ್ ಯಾತ್ರಾರ್ಥಿಗಳ (ಜಥಾ) ಜೊತೆ ಪಾಕಿಸ್ತಾನಕ್ಕೆ ತೆರಳಿದ್ದ 12 ಹಿಂದೂ ಯಾತ್ರಾರ್ಥಿಗಳನ್ನು ಪಾಕಿಸ್ತಾನದ ಅಧಿಕಾರಿಗಳು ವಾಪಸ್ ಕಳುಹಿಸಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಬದ್ಧತೆಗಳ ಬಗ್ಗೆ ಕಳವಳ ಮೂಡಿಸಿದೆ.
“ಹಿಂದೂಗಳೆಂದು ವಾಪಸ್ ಕಳುಹಿಸಿದರು”
1,932 ಯಾತ್ರಾರ್ಥಿಗಳಿದ್ದ ಗುಂಪು ನಿನ್ನೆ(ಮಂಗಳವಾರ) ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿತ್ತು. ಆರಂಭದಲ್ಲಿ ಎಲ್ಲರಿಗೂ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಪಾಕಿಸ್ತಾನದ ಕಡೆಯ ವಲಸೆ ಕೌಂಟರ್‌ಗಳಲ್ಲಿ 12 ಹಿಂದೂ ಯಾತ್ರಾರ್ಥಿಗಳನ್ನು ತಡೆದು, ಅವರಿಗೆ ಪ್ರವೇಶ ನಿರಾಕರಿಸಲಾಯಿತು.
ಈ ಕುರಿತು ಮಾತನಾಡಿರುವ ವಾಪಸ್ ಕಳುಹಿಸಲ್ಪಟ್ಟ ಯಾತ್ರಾರ್ಥಿಗಳಲ್ಲಿ ಒಬ್ಬರಾದ ಅಮೇರ್ ಚಂದ್, “ನಾವು ಹಿಂದೂಗಳಾಗಿದ್ದ ಕಾರಣಕ್ಕೆ ನಮ್ಮನ್ನು ವಾಪಸ್ ಕಳುಹಿಸಲಾಯಿತು. ನಾವು ಸಿಖ್ ಜಥಾದ ಭಾಗವಾಗಿ ಯಾತ್ರೆಗೆ ಹೋಗಲು ಬಯಸಿದ್ದೆವು. ಆದರೆ ಪಾಕಿಸ್ತಾನಿ ಅಧಿಕಾರಿಯೊಬ್ಬರು, ‘ಈ ಜಥಾದಲ್ಲಿ ನಿಮಗೆ ಏನು ಕೆಲಸ?’ ಎಂದು ಪ್ರಶ್ನಿಸಿ ನಮ್ಮನ್ನು ತಡೆದರು” ಎಂದು ಅಳಲು ತೋಡಿಕೊಂಡಿದ್ದಾರೆ.
ಹಣವನ್ನೂ ಲೂಟಿ ಮಾಡಿದ ಪಾಕ್
ಈ ಹಿಂದೆ ಪಾಕಿಸ್ತಾನದ ಪ್ರಜೆಯಾಗಿದ್ದು, 2017ರಲ್ಲಿ ಭಾರತೀಯ ಪೌರತ್ವ ಪಡೆದಿದ್ದ ಅಮೇರ್ ಚಂದ್, “ನಾವು ಪ್ರಯಾಣಕ್ಕಾಗಿ ಪಾವತಿಸಿದ್ದ ಬಸ್ ಶುಲ್ಕವನ್ನು ಕೂಡ ನಮಗೆ ಮರುಪಾವತಿಸಲಿಲ್ಲ. ಪಾಕಿಸ್ತಾನ ನಮ್ಮನ್ನು ಲೂಟಿ ಮಾಡಿದೆ” ಎಂದು ಆರೋಪಿಸಿದ್ದಾರೆ.
ಅಮೃತಸರದ ಅಧಿಕಾರಿಗಳು ಈ ಘಟನೆಯನ್ನು ಖಚಿತಪಡಿಸಿದ್ದು, 12 ಮಂದಿಯೂ ಭಾರತಕ್ಕೆ ವಾಪಸಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಿಂದೂ ಯಾತ್ರಾರ್ಥಿಗಳ ಪಾಸ್‌ಪೋರ್ಟ್‌ಗಳ ಮೇಲೆ ಆರಂಭದಲ್ಲಿ ಪ್ರವೇಶಕ್ಕೆ ಅನುಮತಿ ನೀಡಿದ್ದ ಇಮಿಗ್ರೇಷನ್ ಮುದ್ರೆ ಇತ್ತು, ಆದರೆ ನಂತರ ಪಾಕಿಸ್ತಾನಿ ಅಧಿಕಾರಿಗಳು ಆ ಅನುಮತಿಯನ್ನು ಹಿಂಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಆಪರೇಷನ್ ಸಿಂದೂರ’ದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಜಥಾ ಇದಾಗಿದೆ.
ಭಾರತ ಸರ್ಕಾರದಿಂದ ತೀವ್ರ ಖಂಡನೆ, ರಾಯಭಾರಿಗೆ ಸಮನ್ಸ್
ಪಾಕಿಸ್ತಾನಕ್ಕೆ ತೆರಳಿದ್ದ 12 ಹಿಂದೂ ಯಾತ್ರಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಘಟನೆಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಸಂಬಂಧ, ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ನ ಹಿರಿಯ ರಾಜತಾಂತ್ರಿಕರೊಬ್ಬರನ್ನು ಕರೆಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ.
ಪಾಕಿಸ್ತಾನದ ಈ ಕ್ರಮವು “ಬಹಿರಂಗ ಧಾರ್ಮಿಕ ತಾರತಮ್ಯ” ಮತ್ತು “ಸಾರ್ವತ್ರಿಕ ಮಾನವ ಹಕ್ಕುಗಳ ಉಲ್ಲಂಘನೆ” ಎಂದು ಭಾರತ ಬಣ್ಣಿಸಿದೆ. 1974ರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ದ್ವಿಪಕ್ಷೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.
ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದ ಯಾತ್ರಾರ್ಥಿಗಳಿಗೆ ಆರಂಭದಲ್ಲಿ ಪ್ರವೇಶ ನೀಡಿ, ನಂತರ ಅವರನ್ನು ತಡೆದು ವಾಪಸ್ ಕಳುಹಿಸಿರುವುದು ಅತ್ಯಂತ ಕಳವಳಕಾರಿ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಬೇಕೆಂದು ಭಾರತವು ಪಾಕಿಸ್ತಾನವನ್ನು ಆಗ್ರಹಿಸಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ | ಮೂವರು ಸ್ಥಳದಲ್ಲೇ ದುರ್ಮರಣ!



















