ಶಾಲಾ ಬಸ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 25 ಜನ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಥೈಲ್ಯಾಂಡ್ ನಲ್ಲಿ 44 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಹೆಚ್ಚಿನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.
ಥೈಲ್ಯಾಂಡ್ ನ ರಂಗ್ ಸಿಟ್ ಶಾಪಿಂಗ್ ಮಾಲ್ ಹತ್ತಿರ ಫಾಹೋನ್ ಯೋಥಿನ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಲಾನ್ ಸಕ್ ಜಿಲ್ಲೆಯ ವಾಟ್ ಖಾವೊ ಪ್ರಾಯ ಸಂಘರಮ್‌ನಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸದಲ್ಲಿ ಆರು ಶಿಕ್ಷಕರು ಸಹ ಭಾಗವಹಿಸಿದ್ದರು.
ಗೃಹ ಸಚಿವ ಅನುತಿನ್ ಚರಣ್ವಿರಾಕುಲ್ ಅವರು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಸಾವಿನ ಸಂಖ್ಯೆಯನ್ನು ಅಧಿಕಾರಿಗಳು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನುಳಿದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ಇಡೀ ಜಗತ್ತು ಈ ಘಟನೆಗೆ ಆತಂಕ ವ್ಯಕ್ತಪಡಿಸಿದೆ.