ಬಂಧು ಮಿತ್ರರೇ, ಪೋಸ್ಟ್ ಆಫೀಸ್ ಎಂದರೆ ಈಗ ಬರೀ ಪತ್ರಗಳನ್ನು ಪೋಸ್ಟ್ ಮಾಡುವ ಕಚೇರಿಯಾಗಿ ಉಳಿದಿಲ್ಲ. ಪೋಸ್ಟ್ ಆಫೀಸ್ ಈಗ ವಿಶ್ವಾಸಾರ್ಹ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ. ಅದರಲ್ಲೂ, ಸಣ್ಣ ಪ್ರಮಾಣದ ಹೂಡಿಕೆ, ಉಳಿತಾಯ ಯೋಜನೆಗಳಿಗೆ ಒಳ್ಳೆಯ ಬ್ಯಾಂಕ್ ಆಗಿದೆ. ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿಗೆ ಒಳ್ಳೆಯ ರಿಟರ್ನ್ಸ್ ಇದೆ. ಹಾಗಾದರೆ, ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿ ಒಳ್ಳೆ ಲಾಭ ಗಳಿಸಬಹುದಾದ ಯೋಜನೆಗಳು ಯಾವವು ಎಂಬುದನ್ನು ತಿಳಿಯೋಣ ಬನ್ನಿ.
ಅಂಚೆ ಕಚೇರಿಯ ಪ್ರಮುಖ ಉಳಿತಾಯ ಯೋಜನೆಗಳಲ್ಲಿ ರೆಕರಿಂಗ್ ಡೆಪಾಸಿಟ್ ಅಥವಾ ಆರ್ ಡಿ ಸ್ಕೀಮ್ ಅತ್ಯುತ್ತಮವಾಗಿದೆ. ಮಾಸಿಕ ಕನಿಷ್ಠ 100 ರೂ.ನಿಂದ ಸೇವ್ ಮಾಡಬಹುದಾಗಿದ್ದು, ವರ್ಷಕ್ಕೆ ಶೇ.6.7ರಷ್ಟು ಬಡ್ಡಿದರ ಸಿಗಲಿದೆ. ಮಾಸಿಕವಾಗಿ ಆನ್ ಲೈನ್ ಮೂಲಕವೇ ಟ್ರಾನ್ಸ್ ಫರ್ ಮಾಡುವ ವ್ಯವಸ್ಥೆ ಇದೆ. ಐದು, ಹತ್ತು ವರ್ಷದ ಅವಧಿಗೆ ಠೇವಣಿ ಮಾಡಬಹುದಾಗಿದೆ. ಮೂರು ವರ್ಷದ ಬಳಿಕವೇ ಹೂಡಿಕೆಯ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಲಾಗುತ್ತದೆ. ಮೆಚ್ಯೂರ್ ಆಗುವತನಕ ಹಣ ವಾಪಸ್ ಪಡೆಯದಿದ್ದರೆ ಹೆಚ್ಚಿನ ಮೊತ್ತ ಸಿಗಲಿದೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿಯೇ ಪಿಪಿಎಫ್ ಜನಪ್ರಿಯ ಸ್ಕೀಮ್ ಆಗಿದೆ. ಪಿಪಿಎಫ್ ಯೋಜನೆ ಅನ್ವಯ ಮಾಸಿಕ ಕನಿಷ್ಠ 500 ರೂ.ನಿಂದ ಉಳಿತಾಯ ಮಾಡಬಹುದಾಗಿದೆ. ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದ್ದು, ಶೇ.7.1ರಷ್ಟು ಬಡ್ಡಿ ನೀಡಲಾಗುತ್ತದೆ. ಅಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ಸಿ ಅಡಿಯಲ್ಲಿ ಹೂಡಿಕೆದಾರರು 1.5 ಲಕ್ಷ ರೂ.ವರೆಗೆ ತೆರಿಗೆ ಲಾಭ ಪಡೆಯಬಹುದಾಗಿದೆ.
ಮನೆಯಲ್ಲಿ ಪುಟ್ಟ ಹೆಣ್ಣುಮಗಳಿದ್ದಾಳೆ. ಆಕೆಯ ಶಿಕ್ಷಣ, ಮದುವೆಗೆ ಹಣ ಹೊಂದಿಸಬೇಕು ಎಂದರೆ ಸುಕನ್ಯಾ ಸಮೃದ್ಧಿ ಯೋಜನೆಯು ಹೇಳಿ ಮಾಡಿಸಿದ ಯೋಜನೆಯಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು, 10 ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದೆ. ಮಾಸಿಕ 250 ರೂ.ನಿಂದ ವರ್ಷಕ್ಕೆ 1.5 ಲಕ್ಷ ರೂ.ವರೆಗೆ ಠೇವಣಿ ಮಾಡಬಹುದಾಗಿದೆ. ಶೇ.8.2ರಷ್ಟು ಬಡ್ಡಿದರ ಸಿಗಲಿದ್ದು, ಆಕೆಗೆ 18 ವರ್ಷ ತುಂಬಿದ ಬಳಿಕವೇ ಹಣ ಡ್ರಾ ಮಾಡಬಹುದಾಗಿದೆ.
ಮನೆಯಲ್ಲಿರುವ ಹಿರಿಯ ನಾಗರಿಕರು ಕೂಡ ಉಳಿತಾಯ, ಒಳ್ಳೆಯ ರಿಟರ್ನ್ಸ್ ದೃಷ್ಟಿಯಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಆಯ್ದುಕೊಳ್ಳಬಹುದು. ತಿಂಗಳಿಗೆ ಕನಿಷ್ಠ ಸಾವಿರ ರೂ.ನಿಂದ ಹೂಡಿಕೆ ಮಾಡಬಹುದಾಗಿದ್ದು, ವರ್ಷಕ್ಕೆ 30 ಲಕ್ಷ ರೂ. ಠೇವಣಿಯ ಮಿತಿ ಇದೆ. ವರ್ಷಕ್ಕೆ ಶೇ.8.2ರಷ್ಟು ರಿಟರ್ನ್ಸ್ ಸಿಗಲಿದ್ದು, 60 ವರ್ಷ ದಾಟಿದವರು ಉಳಿತಾಯ ಮಾಡಬಹುದಾಗಿದೆ. ಈ ಯೋಜನೆ ಆಯ್ಕೆ ಮಾಡಿಕೊಂಡರೆ, 80ಸಿ ಅನ್ವಯ 50 ಸಾವಿರ ರೂ.ವರೆಗೆ ತೆರಿಗೆ ಉಳಿತಾಯ ಮಾಡಬಹುದಾಗಿದೆ.
ಒಟ್ಟಿನಲ್ಲಿ ಷೇರು ಮಾರುಕಟ್ಟೆ ನಮಗೆ ಅರ್ಥವಾಗಲ್ಲ ಎನ್ನುವವರು, ಮ್ಯೂಚುವಲ್ ಫಂಡ್ಸ್ ಬಗ್ಗೆ ತಿಳಿಯದವರು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೂಲಕ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ಬ್ಯಾಂಕಿಂಗ್ ನಲ್ಲೂ ಈಗ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇದೆ. ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಹಾಗಾಗಿ, ಪೋಸ್ಟ್ ಆಫೀಸ್ ಎಂದರೆ ಈಗ ಮೂಗು ಮುರಿಯಬೇಕಿಲ್ಲ.
ಬಂಧು ಮಿತ್ರರೇ, ಮಾಹಿತಿ ನೀಡಿದ್ದೇವೆ…ತಜ್ಞರೊಂದಿಗೆ ಸಮಾಲೋಚಿಸಿ ಮುಂದುವರೆಯಿರಿ..