ಒಂದೇ ಒಂದು ಸೂಪರ್ ಹಿಟ್ ನೀಡಲು ಸಲ್ಮಾನ್ ಖಾನ್ ಕಳೆದೊಂದು ದಶಕದಿಂದ ನಿರಂತರವಾಗಿ ಎದುರು ನೋಡುತ್ತಿದ್ದಾರೆ.

ಬಜರಂಗಿ ಭಾಯಿಜಾನ್ ಸಿನಿಮಾ ಬಳಿಕ ಇವತ್ತಿಗೂ ಸಲ್ಮಾನ್ ಪಾಲಿಗೆ ಒಂದೊಳ್ಳೇ ಬ್ರೇಕ್ ಥ್ರೂ ಸಿಕ್ಕಿಲ್ಲ. ಇತ್ತೀಚೆಗೆ ದಕ್ಷಿಣದ ನಿರ್ದೇಶಕ ಮುರುಗದಾಸ್ ಜೊತೆ ಮಾಡಿದ ಸಿಕಂದರ್ ಕೂಡ ಮಕಾಡೆ ಮಲಗಿದೆ. ಇದರ ನಡುವೆ ಬಜರಂಗಿ ಭಾಯಿಜಾನ್ ಪಾರ್ಟ್ 2ಗೆ ಸಲ್ಮಾನ್ ದುಂಬಾಲು ಬಿದ್ದರೂ ಅದ್ಯಾಕೋ ವರ್ಕ್ ಔಟ್ ಆಗಿಲ್ಲ. ಕಡೆಗೂ ಕಳೆದ 3 ತಿಂಗಳ ಅಲೆದಾಟದ ಬಳಿಕವೀಗ ಸಲ್ಮಾನ್ ಸ್ಕ್ರಿಪ್ಟ್ ಒಂದನ್ನು ಓಕೆ ಮಾಡಿದ್ದಾರೆ.

ಸಲ್ಮಾನ್ ಇದೇ ಮೊದಲ ಬಾರಿ ತಮ್ಮ ವೃತ್ತಿ ಜೀವನದಲ್ಲಿ ಪೂರ್ಣ ಪ್ರಮಾಣದ ಸೇನಾಧಿಕಾರಿಯಾಗಿ ಮಿಂಚಲಿದ್ದಾರೆ.

2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಸೇನೆಯ ಸತ್ಯ ಕತೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗುತ್ತಿದೆ. ಇಂಡಿಯಾಸ್ ಮೋಸ್ಟ್ ಫೇರ್ ವೆಲ್ಸ್ ಕಾದಂಬರಿ ಆಧರಿತ ಸಿನಿಮಾ ಇದಾಗಿದ್ದು, ಈ ವರ್ಷದ ಜುಲೈನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ. 70 ದಿನಗಳ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಕಾರ್ಗಿಲ್ ಮತ್ತು ಲಡಾಖ್ ನಲ್ಲಿ ಚಿತ್ರೀಕರಣಕ್ಕೆ ತಯಾರಿ ಆರಂಭವಾಗಿದೆ. ಇನ್ನು ಚಿತ್ರವನ್ನು ಖ್ಯಾತ ನಿರ್ದೇಶಕ ಅಪೂರ್ವ ಲಾಖಿಯ ಡೈರೆಕ್ಟ್ ಮಾಡ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಮೂವರು ಯುವ ನಾಯಕರಿಗೂ ಪ್ರಮುಖ ಪಾತ್ರ ಇರಲಿದ್ದು, ಯಾರಿಗೆಲ್ಲಾ ಸಲ್ಮಾನ್ ಜೊತೆ ನಟಿಸೋ ಭಾಗ್ಯ ಸಿಗತ್ತೆ ಅನ್ನೋದಿನ್ನೂ ನಿಗೂಢವಾಗಿದೆ. ಉಳಿದಂತೆ ಸಲ್ಮಾನ್ ಜೊತೆ ಮಿಂಚಲಿರೋ ಬೆಡಗಿ ಕೂಡಾ ಇನ್ನಷ್ಟೇ ಆಯ್ಕೆಯಾಗಬೇಕಿದೆ.