ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 52ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ನೆಚ್ಚಿನ ಚಕ್ರವರ್ತಿ, ಬಾದ್ ಷಾ, ಕಿಚ್ಚ, ಹುಚ್ಚನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ಗಿಫ್ಟ್ ನೀಡಿದ ವಿಚಾರ ಭಾರೀ ಚರ್ಚೆಯಾಗುತ್ತಿದೆ.
ನಟ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕಾಲಿವುಡ್, ಬಾಲಿವುಡ್ ನಲ್ಲೂ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2008ರಲ್ಲಿ ರಿಲೀಸ್ ಆದ ‘ಫೂಂಕ್’ ಚಿತ್ರದ ಮೂಲಕ ಕಿಚ್ಚ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಸಲ್ಮಾನ್ ಖಾನ್ ಅವರ ‘ದಬಂಗ್ 3’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲದಿದ್ದರೂ ಸುದೀಪ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಒಂದು ಉತ್ತಮ ಬಾಂಧವ್ಯ ಬೆಳೆಯುವಂತೆ ಮಾಡಿದೆ.

‘ದಂಬಂಗ್ 3’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ನಟ, ಕೊರಿಯೋಗ್ರಾಫರ್ ಪ್ರಭುದೇವ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಶೂಟ್ ವೇಳೆ ಸುದೀಪ್ ಗೆ ಸಲ್ಮಾನ್ ಖಾನ್ ಅವರು ತಮ್ಮ ಫೇವರಿಟ್ ಜಾಕೆಟ್ ನೀಡಿದ್ದರು. ಈ ಜಾಕೆಟ್ ನಲ್ಲಿ ಸಲ್ಲು ಅವರ ಫೇವರಿಟ್ ಶ್ವಾನದ ಚಿತ್ರ ಪ್ರಿಂಟ್ ಇತ್ತು. ಜೊತೆಗೆ ಬಿಎಂಡಬ್ಲ್ಯೂ ಎಂ 5 ಕಾರನ್ನು ಸಲ್ಮಾನ್ ಖಾನ್ ಸುದೀಪ್ ಗೆ ಉಡುಗೊರೆಯಾಗಿ ನೀಡಿದ್ದರು. ಈ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಲ್ಲು ಹಾಗೂ ಕಿಚ್ಚನ ಬಾಂಧವ್ಯದ ಬಗ್ಗೆ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.