ಕೇರಳ :ಶಬರಿಮಲೆಯ ವಾರ್ಷಿಕ ಯಾತ್ರೆಗಾಗಿ ಇಂದಿನಿಂದ ಎರಡು ತಿಂಗಳ ಕಾಲ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಮೊದಲ ದಿನವೇ ಅಯ್ಯಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಸಾಂಪ್ರದಾಯಿಕ ಕಪ್ಪು ಉಡುಪು ಧರಿಸಿ, ‘ಇರುಮುಡಿಕ್ಕೆಟ್ಟು’ವನ್ನು ತಲೆಯ ಮೇಲೆ ಹೊತ್ತುಕೊಂಡ ರಾಜ್ಯ ಮತ್ತು ಹೊರ ರಾಜ್ಯದ ಭಕ್ತರು ದರ್ಶನಕ್ಕೆ ಆಗಮಿಸಿದ್ದು, ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು.
ಗರ್ಭಗುಡಿ ತೆರೆದ ಬಳಿಕ ನಿರ್ಮಾಲ್ಯ ಅಭಿಷೇಕ, ಗಣಪತಿ ಹೋಮ, ನೆಯ್ಯಭಿಷೇಕ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 1ಗಂಟೆಗೆ ದೇಗುಲದ ದ್ವಾರ ಮುಚ್ಚಲಾಗುವುದು. ಮಧ್ಯಾಹ್ನ 3ರ ನಂತರ ಮತ್ತೆ ತೆರೆದು ರಾತ್ರಿ 11ಕ್ಕೆ ಹರಿವರಸನಂ ಗೀತೆ ಹಾಡಿದ ಬಳಿಕ ಮತ್ತೆ ಮುಚ್ಚಲಾಗುವುದು ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಮಂಡಲ – ಮಕರವಿಳಕ್ಕು ತೀರ್ಥಯಾತ್ರೆಗೆ ಮುಂಚಿತವಾಗಿ ಭಾನುವಾರ ಸಂಜೆ ಅಯ್ಯಪ್ಪ ದೇವಸ್ಥಾನವನ್ನು ತೆರೆಯಲಾಗಿದೆ. ಎರಡು ತಿಂಗಳ ಕಾಲ ದೇವರ ದರ್ಶನಕ್ಕೆ ದೇಗುಲ ಮುಕ್ತವಾಗಿದ್ದು, ವಿಶ್ವದೆಲ್ಲೆಡೆ ಅಯ್ಯಪ್ಪನ ಭಕ್ತರು ದರ್ಶನಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ : ಹಾಲಿನ ದರ ಏರಿಕೆ ಮಾಡಲ್ಲ, ಈ ಬಗ್ಗೆ ಯಾವುದೇ ಪ್ರಸ್ತಾಪ ಬೇಡ | ಸಚಿವ ಕೆ ವೆಂಕಟೇಶ್ ಹೇಳಿಕೆ



















