ಬೆಂಗಳೂರು: ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, ಹೆಚ್ಚಿನ ಜನಕ್ಕೆ ತಾವು ರೈಲಿನಲ್ಲಿ ಪ್ರಯಾಣಿಸುವುದಕ್ಕೂ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಗೊತ್ತಿರುವುದಿಲ್ಲ. ಆದರೆ, ಪ್ರತಿ ರೈಲು ಪ್ರಯಾಣಿಕರು, ಅದರಲ್ಲೂ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವವರು ಕಡ್ಡಾಯವಾಗಿ ಈ ಅಪಘಾತ ವಿಮಾ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಹೌದು, ಆನ್ ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವವರಿಗೆ ಕೇವಲ 45 ರೂಪಾಯಿಯಲ್ಲಿ 10 ಲಕ್ಷ ರೂಪಾಯಿ ವಿಮಾ ಕವರ್ ಇರುವ ಇನ್ಶೂರೆನ್ಸ್ ನೀಡಲಾಗುತ್ತದೆ. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗಲೇ, 45 ಪೈಸೆ ಪಾವತಿಸುವ ಮೂಲಕ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ರೈಲು ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿವರೆಗೆ ಹಣಕಾಸು ನೆರವು ನೀಡಲಾಗುತ್ತದೆ. ಅಪಘಾತದಲ್ಲಿ ಅಂಗವೈಕಲ್ಯ, ಗಾಯಗೊಂಡವರಿಗೂ ವಿಮಾ ಸುರಕ್ಷತೆ ಇದೆ.
ಯಾವುದಕ್ಕೆ ಎಷ್ಟು ವಿಮಾ ಸುರಕ್ಷತೆ
ನಿಧನ- 10 ಲಕ್ಷ ರೂಪಾಯಿ
ಶಾಶ್ವತ ಅಂಗವೈಕಲ್ಯ: 10 ಲಕ್ಷ ರೂಪಾಯಿ
ಭಾಗಶಃ ಶಾಶ್ವತ ಅಂಗವೈಕಲ್ಯ: 7.5 ಲಕ್ಷ ರೂಪಾಯಿ
ಗಾಯಗೊಂಡರೆ ನೀಡುವ ಚಿಕಿತ್ಸಾ ವೆಚ್ಚ: 2 ಲಕ್ಷ ರೂಪಾಯಿ
ರೈಲು ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ, ಅವರ ಸಂಬಂಧಿಕರು ಅಥವಾ ನಾಮನಿರ್ದೇಶಿತರಿಗೆ ವಿಮಾ ಕಂಪನಿಯು ವಿಮೆಯ ಮೊತ್ತವನ್ನು ನೀಡಲಾಗುತ್ತದೆ. ಟಿಕೆಟ್ ಬುಕ್ ಆದಾಗಲೇ ವಿಮೆಯ ಸಂಖ್ಯೆಯನ್ನು ನೀಡಲಾಗುತ್ತದೆ. ರೈಲ್ವೆ ಟಿಕೆಟ್, ವಿಮಾ ನಂಬರ್ ಇಟ್ಟುಕೊಂಡು ಪ್ರಯಾಣಿಕರ ಸಂಬಂಧಿಕರು ವಿಮೆಯನ್ನು ಕ್ಲೇಮ್ ಮಾಡಬಹುದಾಗಿದೆ. ಆದರೆ, ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ನಾಮಿನಿಯ ಹೆಸರನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ.