ನವದೆಹಲಿ: ನವದೆಹಲಿಯ ಕಪಾಸೇರಾ ಪ್ರದೇಶದಲ್ಲಿರುವ ‘ಫನ್ ಎನ್ ಫುಡ್ ವಿಲೇಜ್’ ಎಂಬ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದ ಭೀಕರ ರೋಲರ್ ಕೋಸ್ಟರ್ ಅವಘಡ(Roller Coaster Accident)ದಲ್ಲಿ 24 ವರ್ಷದ ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟಿದ್ದಾಳೆ. ಮೃತಳನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಈಕೆ ಹಸೆಮಣೆ ಏರುವವಳಿದ್ದಳು. ಅಷ್ಟರಲ್ಲೇ, ಈ ದುರ್ಘಟನೆಯು ಆಕೆಯ ಜೀವ ತೆಗೆದಿದೆ. ಈ ಘಟನೆಯು ದೇಶದ ರಾಜಧಾನಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಪ್ರಿಯಾಂಕಾ ತನ್ನ ಭಾವೀ ಪತಿ ನಿಖಿಲ್ ಜೊತೆಗೆ ಫನ್ ಎನ್ ಫುಡ್ ವಿಲೇಜ್‌ಗೆ ತೆರಳಿದ್ದರು. ಫೆಬ್ರವರಿ 2023ರಲ್ಲೇ ಈ ಜೋಡಿಯ ನಿಶ್ಚಿತಾರ್ಥ ಆಗಿತ್ತು. 2026 ರ ಫೆಬ್ರವರಿಯಲ್ಲಿ ಮದುವೆಯೂ ನಿಗದಿಯಾಗಿತ್ತು. ಪ್ರಿಯಾಂಕಾ ಮತ್ತು ನಿಖಿಲ್ ಅರ್ಧ ದಿನ ವಾಟರ್ ರೈಡ್‌ಗಳಲ್ಲಿ ಕಳೆದ ನಂತರ, ಸಂಜೆ 6:15ರ ಸುಮಾರಿಗೆ ರೋಲರ್ ಕೋಸ್ಟರ್ ರೈಡ್‌ಗೆ ಹೋಗಿದ್ದರು. ರೈಡ್ ನಲ್ಲಿ ಎತ್ತರಕ್ಕೆ ತಲುಪಿದಾಗ ರೋಲರ್ ಕೋಸ್ಟರ್‌ನ ಒಂದು ಕಂಬವು (ಸ್ಟ್ಯಾಂಡ್) ಏಕಾಏಕಿ ಮುರಿದುಬಿದ್ದಿದೆ. ಇದರ ಪರಿಣಾಮವಾಗಿ ಪ್ರಿಯಾಂಕಾ ತನ್ನ ಸೀಟಿನಿಂದ ಕೆಳಗೆ ಜಾರಿ ಬಿದ್ದಿದ್ದಾರೆ. ಗಂಭೀರ ಗಾಯಗಳಾಗಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು ಎಂದು ನಿಖಿಲ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ವರದಿಯ ಪ್ರಕಾರ, ಪ್ರಿಯಾಂಕಾ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತಸ್ರಾವ (ENT bleed), ಬಲಗಾಲಿನಲ್ಲಿ ಕತ್ತರಿಸಿದ ಗಾಯ, ಎಡಗಾಲಿನಲ್ಲಿ ಚುಚ್ಚಿದ ಗಾಯ ಮತ್ತು ಬಲಗೈ ಮತ್ತು ಎಡ ಮೊಣಕಾಲಿನಲ್ಲಿ ಹಲವಾರು ಸವೆತಗಳು ಉಂಟಾಗಿ, ಗಂಭೀರ ಗಾಯಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಕಾನೂನು ಕ್ರಮ ಮತ್ತು ತನಿಖೆ
ಈ ಘಟನೆಯ ಬಗ್ಗೆ ಕಪಾಸೇರಾ ಪೊಲೀಸ್ ಠಾಣೆಗೆ ಮೆಡಿಕೋ-ಲೀಗಲ್ ಕೇಸ್ (MLC) ಮಾಹಿತಿ ದೊರೆತ ನಂತರ, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ವರದಿಯನ್ನು ಸಂಗ್ರಹಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 289 (ಯಂತ್ರಗಳ ಸಂಬಂಧದಲ್ಲಿ ನಿರ್ಲಕ್ಷ್ಯದ ನಡವಳಿಕೆ) ಮತ್ತು ಸೆಕ್ಷನ್ 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ, ಪ್ರಿಯಾಂಕಾ ಕುಟುಂಬವು ಅಮ್ಯೂಸ್‌ಮೆಂಟ್ ಪಾರ್ಕ್‌ನ ಆಡಳಿತದ ವಿರುದ್ಧ ಕಿಡಿಕಾರಿದೆ.
ಪಾರ್ಕ್ ಆಡಳಿತವು ಸೂಕ್ತ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಪ್ರಿಯಾಂಕಾ ಬಿದ್ದ ನಂತರ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿಲ್ಲ ಮತ್ತು ಘಟನೆಯನ್ನು ಮುಚ್ಚಿಹಾಕಲು ರೋಲರ್ ಕೋಸ್ಟರ್ ಪ್ರದೇಶವನ್ನು ತಕ್ಷಣವೇ ಮುಚ್ಚಲಾಗಿದೆ ಎಂದು ಪ್ರಿಯಾಂಕಾ ಅವರ ಸಹೋದರ ಮೋಹಿತ್ ಆರೋಪಿಸಿದ್ದಾರೆ.
ಈ ದುರ್ಘಟನೆಯ ನಂತರ, ಫನ್ ಎನ್ ಫುಡ್ ವಿಲೇಜ್ ಆಡಳಿತವು ರೋಲರ್ ಕೋಸ್ಟರ್ ರೈಡ್ ಅನ್ನು ಸ್ಥಗಿತಗೊಳಿಸಿದೆ. ಆ ಪ್ರದೇಶವನ್ನು ದುರಸ್ತಿಗಾಗಿ ಸೀಲ್ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನರು ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಸುರಕ್ಷತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಇಂತಹ ದುರಂತಗಳನ್ನು ತಪ್ಪಿಸಲು ಕಠಿಣ ನಿಯಮಗಳ ಅಗತ್ಯವಿದೆ ಎಂದಿದ್ದಾರೆ. ಪ್ರಿಯಾಂಕಾ ಅವರು ದೆಹಲಿಯ ಚಾಣಕ್ಯಪುರಿಯ ನಿವಾಸಿಯಾಗಿದ್ದು, ನೊಯ್ಡಾದ ಸೆಕ್ಟರ್ 3 ರಲ್ಲಿ ಟೆಲಿಕಾಂ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು.