ನ್ಯೂಯಾರ್ಕ್: ಮಂಗಳ ಗ್ರಹದಿಂದ ಭೂಮಿಗೆ ಬಿದ್ದ ಅತಿದೊಡ್ಡ ಉಲ್ಕೆಯು ಸೋಥೆಬಿಸ್ ಹರಾಜಿನಲ್ಲಿ ಬರೋಬ್ಬರಿ 44 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಎನ್‌ಡಬ್ಲ್ಯೂಎ 16788 ಎಂದು ಹೆಸರಿಸಲಾದ ಈ 24.5 ಕೆ.ಜಿ ತೂಕದ ಉಲ್ಕಾಶಿಲೆಯು ಆನ್‌ಲೈನ್ ಮತ್ತು ದೂರವಾಣಿ ಮೂಲಕ ನಡೆದ 15 ನಿಮಿಷಗಳ ಬಿಡ್ಡಿಂಗ್ ನಂತರ ಅನಾಮಧೇಯ ಖರೀದಿದಾರನ ಪಾಲಾಗಿದೆ. ಇದರ ಆರಂಭಿಕ ಅಂದಾಜು ಬೆಲೆ 17-34 ಕೋಟಿ ರೂ. ಆಗಿತ್ತು.
ಈ ಅಪರೂಪದ ಉಲ್ಕೆಯನ್ನು ನವೆಂಬರ್ 2023ರಲ್ಲಿ ನೈಜರ್‌ನ ಸಹಾರಾ ಮರುಭೂಮಿಯಲ್ಲಿ ಪತ್ತೆಯಾಗಿತ್ತು. ಎನ್‌ಡಬ್ಲ್ಯೂಎ 16788ರ ಭೂಮಿಯವರೆಗಿನ ಪ್ರಯಾಣವು ಅಸಾಮಾನ್ಯವಾಗಿದೆ. ತಜ್ಞರ ಪ್ರಕಾರ, ಸುಮಾರು ಐದು ಮಿಲಿಯನ್ ವರ್ಷಗಳ ಹಿಂದೆ, ಶಕ್ತಿಶಾಲಿ ಕ್ಷುದ್ರಗ್ರಹ ಅಥವಾ ಧೂಮಕೇತುವಿನ ಅಪ್ಪಳಿಸುವಿಕೆಯು ಇದನ್ನು ಮಂಗಳನ ಹೊರಪದರದಿಂದ ಸಿಡಿಸಿ, 140 ಮಿಲಿಯನ್ ಮೈಲಿಗಳ ಬಾಹ್ಯಾಕಾಶ ಪಯಣದ ನಂತರ ಭೂಮಿಗೆ ಅಪ್ಪಳಿಸಿದೆ.
ಸೋಥೆಬಿಸ್‌ನ ಉಪಾಧ್ಯಕ್ಷೆ ಮತ್ತು ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ವಿಭಾಗದ ಜಾಗತಿಕ ಮುಖ್ಯಸ್ಥೆ ಕ್ಯಾಸಂಡ್ರಾ ಹ್ಯಾಟನ್, “ಇದು ಭೂಮಿಗೆ ಬಂದು ಮರುಭೂಮಿಯಲ್ಲಿ ಬಿದ್ದಿರುವುದು ಮತ್ತು ಅದರ ಮಹತ್ವವನ್ನು ಗುರುತಿಸಬಲ್ಲ ಯಾರೋ ಇದನ್ನು ಕಂಡುಹಿಡಿದಿರುವುದು ನಂಬಲಾಗದ ಸಂಗತಿ” ಎಂದು ಹೇಳಿದ್ದಾರೆ. ಇಂತಹ ಹೆಚ್ಚಿನ ಬಾಹ್ಯಾಕಾಶ ಭಗ್ನಾವಶೇಷಗಳು ಭೂಮಿಯ ವಾತಾವರಣದಲ್ಲಿ ಸುಟ್ಟುಹೋಗುತ್ತವೆ ಅಥವಾ ಸಾಗರದಲ್ಲಿ ಬೀಳುತ್ತವೆ.
ಈ ಶಿಲೆಯ ವೈಶಿಷ್ಟ್ಯಗಳೇನು
ವಿಶೇಷ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ನಂತರ, ವಿಜ್ಞಾನಿಗಳು ಇದು ಮಂಗಳ ಮೂಲದ ಶಿಲೆ ಎಂದು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಭೂಮಿಯಲ್ಲಿ ಕಂಡುಬಂದಿರುವ ಎರಡನೇ ಅತಿದೊಡ್ಡ ಮಂಗಳದ ಉಲ್ಕೆಗಿಂತ ಸುಮಾರು 70% ದೊಡ್ಡದಾಗಿರುವುದು ಇದರ ಮತ್ತೊಂದು ವಿಶೇಷ. ಪ್ರಪಂಚದಾದ್ಯಂತ ಕೇವಲ 400 ಅಧಿಕೃತವಾಗಿ ಗುರುತಿಸಲ್ಪಟ್ಟ ಮಂಗಳದ ಉಲ್ಕೆಗಳು ಕಂಡುಬಂದಿದ್ದು, ಎನ್‌ಡಬ್ಲ್ಯೂಎ 16788 ತನ್ನ ಬೃಹತ್ ಗಾತ್ರ, ಆಕರ್ಷಕ ಕೆಂಪು ಬಣ್ಣ ಮತ್ತು ಫ್ಯೂಷನ್ ಕ್ರಸ್ಟ್‌ನಿಂದ (ವಾತಾವರಣದ ಮೂಲಕ ಅದರ ಉರಿಯುವಿಕೆಯ ಚಿಹ್ನೆ) ಎದ್ದು ಕಾಣುತ್ತದೆ. “ಭೂಮಿಯಲ್ಲಿರುವ ಮಂಗಳದ ಅತಿದೊಡ್ಡ ತುಣುಕು ಇದಾಗಿದೆ”.