ಕಾಬೂಲ್/ನವದೆಹಲಿ: ಒಂದು ಕಾಲದಲ್ಲಿ ಅಫ್ಘಾನಿಸ್ತಾನದ ಔಷಧ ಮಾರುಕಟ್ಟೆಯ ಶೇ. 70ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಇದೀಗ ಭಾರೀ ಹಿನ್ನಡೆಯಾಗಿದೆ. ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಭಾರತದ ಔಷಧಿಗಳು ತಮ್ಮ ಗುಣಮಟ್ಟ ಮತ್ತು ಕಡಿಮೆ ದರದಿಂದಾಗಿ ಜನಪ್ರಿಯವಾಗುತ್ತಿದ್ದು, ಪಾಕಿಸ್ತಾನದ ಔಷಧಿಗಳನ್ನು ಹಿಂದಿಕ್ಕುತ್ತಿವೆ.
ಅಫ್ಘಾನಿಸ್ತಾನದ ಜನಪ್ರಿಯ ವ್ಲಾಗರ್ ಫಜಲ್ ಅಫ್ಘಾನ್ ಅವರ ಇತ್ತೀಚಿನ ಅನುಭವ ಇದಕ್ಕೆ ಸಾಕ್ಷಿಯಾಗಿದೆ. ತಲೆನೋವಿಗೆಂದು ಮೆಡಿಕಲ್ ಶಾಪ್‌ಗೆ ಹೋದ ಫಜಲ್, ಪಾಕಿಸ್ತಾನ ಅಥವಾ ಟರ್ಕಿ ಬ್ರಾಂಡ್‌ನ ಪ್ಯಾರಸಿಟಮಾಲ್ ಕೇಳಿದ್ದಾರೆ. ಆದರೆ ಅಂಗಡಿಯವರು ಭಾರತದ ಪ್ಯಾರಸಿಟಮಾಲ್ ನೀಡಿದ್ದು, ಇದು ಕೇವಲ 10 ಅಫ್ಘಾನಿಗಳಿಗೆ (ಅಲ್ಲಿನ ಕರೆನ್ಸಿ) ಲಭ್ಯವಿತ್ತು. ಟರ್ಕಿ ಬ್ರಾಂಡ್‌ಗೆ ಹೋಲಿಸಿದರೆ ಇದು ನಾಲ್ಕು ಪಟ್ಟು ಅಗ್ಗ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಸ್ವತಃ ಫಜಲ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪಾಕ್ ಔಷಧಿಗಳಿಗೆ ನಿಷೇಧ, ಭಾರತಕ್ಕೆ ಸ್ವಾಗತ:
ಗಡಿ ಸಂಘರ್ಷಗಳಿಂದಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಬಂಧ ಹದಗೆಟ್ಟಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನದ ಉಪಪ್ರಧಾನಿ ಅಬ್ದುಲ್ ಘನಿ ಬರಾದರ್ ಕಳಪೆ ಗುಣಮಟ್ಟದ ಕಾರಣ ನೀಡಿ ಪಾಕಿಸ್ತಾನಿ ಔಷಧಿಗಳನ್ನು ನಿಷೇಧಿಸಿದ್ದಾರೆ. ವ್ಯಾಪಾರಿಗಳಿಗೆ ಭಾರತ, ಇರಾನ್ ಮತ್ತು ಮಧ್ಯ ಏಷ್ಯಾದಿಂದ ಔಷಧಿ ಆಮದು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಭಾರತದ ನೆರವಿನ ಹಸ್ತ:
2025ರ ನವೆಂಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಔಷಧಿಗಳ ಕೊರತೆ ಉಂಟಾದಾಗ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 73 ಟನ್ ಜೀವರಕ್ಷಕ ಔಷಧಿಗಳನ್ನು ವಿಮಾನದ ಮೂಲಕ ಕಾಬೂಲ್‌ಗೆ ಕಳುಹಿಸಿದ್ದರು.
ಕಾಬೂಲ್‌ನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ (1969ರಲ್ಲಿ ಸ್ಥಾಪಿತ) ಸೇರಿದಂತೆ, ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಟ್ರಾಮಾ ಸೆಂಟರ್ ಮತ್ತು ತಾಯಿ-ಮಕ್ಕಳ ಆಸ್ಪತ್ರೆಗಳನ್ನು ಭಾರತ ನಿರ್ಮಿಸಿದೆ. 2024-25ನೇ ಸಾಲಿನಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ 108 ಮಿಲಿಯನ್ ಡಾಲರ್ ಮೌಲ್ಯದ ಔಷಧಿಗಳನ್ನು ರಫ್ತು ಮಾಡಿದೆ.
ಭಾರತೀಯ ಕಂಪನಿಗಳ ಲಗ್ಗೆ:
ಕೇವಲ ರಫ್ತು ಮಾಡುವುದಲ್ಲದೆ, ಭಾರತೀಯ ಫಾರ್ಮಾ ದೈತ್ಯ ‘ಝೈಡಸ್ ಲೈಫ್‌ಸೈನ್ಸಸ್’ (Zydus Lifesciences) ಅಫ್ಘಾನಿಸ್ತಾನದ ರೋಫಿಸ್ ಇಂಟರ್ನ್ಯಾಷನಲ್ ಗ್ರೂಪ್ ಜೊತೆಗೆ 100 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅನ್ವಯ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲೇ ಔಷಧಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಒಟ್ಟಿನಲ್ಲಿ, ರಾಜತಾಂತ್ರಿಕವಾಗಿ ಮತ್ತು ವಾಣಿಜ್ಯಿಕವಾಗಿ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ತನ್ನ ಹಿಡಿತ ಕಳೆದುಕೊಳ್ಳುತ್ತಿದ್ದರೆ, ಭಾರತವು ‘ವೈದ್ಯೋ ನಾರಾಯಣ ಹರಿಃ’ ಎನ್ನುವಂತೆ ಅಲ್ಲಿನ ಜನರ ಪಾಲಿಗೆ ಸಂಜೀವಿನಿಯಾಗುತ್ತಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಜಿಪಿಎಸ್ ಟ್ರ‍್ಯಾಕರ್ ಹೊಂದಿದ್ದ ರಣಹದ್ದು ಪತ್ತೆ!



















