ನವದೆಹಲಿ: ದುಬೈ ಮೂಲದ ಖ್ಯಾತ ಟ್ರಾವೆಲ್ ವ್ಲಾಗರ್, ಛಾಯಾಗ್ರಾಹಕ ಮತ್ತು ಫೋರ್ಬ್ಸ್ ಇಂಡಿಯಾ ಡಿಜಿಟಲ್ ಸ್ಟಾರ್ ಆಗಿದ್ದ ಅನುನಯ್ ಸೂದ್ (32) ನಿಧನರಾಗಿದ್ದಾರೆ. ಅವರ ಕುಟುಂಬವೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ನಿಧನರಾಗುವ ಕೆಲವೇ ದಿನಗಳ ಹಿಂದೆ ಅವರು ಅಮೆರಿಕದ ಲಾಸ್ ವೇಗಾಸ್‌ನಲ್ಲಿದ್ದರು ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸೂಚಿಸುತ್ತವೆ.

“ನಮ್ಮ ಪ್ರೀತಿಯ ಅನುನಯ್ ಸೂದ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತೀವ್ರ ದುಃಖವಾಗುತ್ತಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ದಯವಿಟ್ಟು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗಾಗಿ ಪ್ರಾರ್ಥಿಸಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಕುಟುಂಬವು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಯಾರಿವರು ಅನುನಯ್ ಸೂದ್?
ಅನುನಯ್ ಸೂದ್, ಪ್ರವಾಸ ಮತ್ತು ಛಾಯಾಗ್ರಹಣದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದ ಯುವ ಪ್ರತಿಭೆ. ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷಕ್ಕೂ ಹೆಚ್ಚು ಮತ್ತು ಯೂಟ್ಯೂಬ್‌ನಲ್ಲಿ 3.8 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರು. ತಮ್ಮ ವಿಶಿಷ್ಟ ಪ್ರಯಾಣದ ವಿಷಯಗಳಿಂದಾಗಿ ಅವರು 2022, 2023 ಮತ್ತು 2024ರಲ್ಲಿ ಸತತವಾಗಿ ಫೋರ್ಬ್ಸ್ ಇಂಡಿಯಾದ ‘ಟಾಪ್ 100 ಡಿಜಿಟಲ್ ಸ್ಟಾರ್‌ಗಳ’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ವಿಶ್ವದ 195 ದೇಶಗಳ ಪೈಕಿ 46 ದೇಶಗಳಿಗೆ ಭೇಟಿ ನೀಡಿದ್ದ ಅನುನಯ್, ದುಬೈನಲ್ಲಿ ವಾಸವಾಗಿದ್ದುಕೊಂಡು ಒಂದು ಮಾರ್ಕೆಟಿಂಗ್ ಏಜೆನ್ಸಿಯನ್ನೂ ನಡೆಸುತ್ತಿದ್ದರು. ಸ್ವಿಟ್ಜರ್‌ಲ್ಯಾಂಡ್ ಪ್ರವಾಸೋದ್ಯಮ, ಸೌದಿ ಅರೇಬಿಯಾ ಪ್ರವಾಸೋದ್ಯಮ, ನ್ಯೂಜಿಲೆಂಡ್ ಪ್ರವಾಸೋದ್ಯಮ ಮಂಡಳಿ, ಒಪ್ಪೋ (OPPO) ಮತ್ತು ಏರ್‌ಟೆಲ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳೊಂದಿಗೆ ಅವರು ಕೆಲಸ ಮಾಡಿದ್ದರು.
ಅಭಿಮಾನಿಗಳ ಸಂತಾಪ
ಅನುನಯ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪದ ಮಹಾಪೂರವನ್ನೇ ಹರಿಸಿದ್ದಾರೆ. “ಶಾಂತಿಯಿಂದ ವಿಶ್ರಮಿಸು ಸಹೋದರ. ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ,” ಎಂದು ಒಬ್ಬರು ಬರೆದರೆ, “ಈ ಸುದ್ದಿ ಸುಳ್ಳಾಗಿದ್ದರೆ ಚೆನ್ನಾಗಿತ್ತು,” ಎಂದು ಮತ್ತೊಬ್ಬರು ಕಂಬನಿ ಮಿಡಿದಿದ್ದಾರೆ.
ಅನುನಯ್ ಅವರ ಕೊನೆಯ ಪೋಸ್ಟ್‌ಗಳು
ತಮ್ಮ ಸಾವಿಗೂ ಮುನ್ನ ಅನುನಯ್ ಲಾಸ್ ವೇಗಾಸ್‌ನಲ್ಲಿದ್ದರು. ಅಲ್ಲಿ ಸ್ಪೋರ್ಟ್ಸ್ ಕಾರುಗಳೊಂದಿಗೆ ಕಳೆದ ಕ್ಷಣಗಳ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, “ಲೆಜೆಂಡರಿ ಮತ್ತು ಕನಸಿನ ಕಾರುಗಳೊಂದಿಗೆ ವಾರಾಂತ್ಯ ಕಳೆದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ,” ಎಂದು ಬರೆದುಕೊಂಡಿದ್ದರು. ಯೂಟ್ಯೂಬ್‌ನಲ್ಲಿ, ನವೆಂಬರ್ 3, 2025ರಂದು ಸ್ವಿಟ್ಜರ್‌ಲ್ಯಾಂಡ್‌ನ ಅಪರಿಚಿತ ಸ್ಥಳಗಳನ್ನು ಪರಿಚಯಿಸುವ ತಮ್ಮ ಕೊನೆಯ ವ್ಲಾಗ್ ಅನ್ನು ಅವರು ಅಪ್‌ಲೋಡ್ ಮಾಡಿದ್ದರು.
ಇದನ್ನೂ ಓದಿ : ಕೆಜಿಎಫ್ “ಚಾಚಾ” ಹರೀಶ್ ರಾಯ್ ವಿಧಿವಶ



















