ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರನ್ನು ಒಳಗೊಂಡ ಕೃತಕ ಬುದ್ಧಿಮತ್ತೆ (AI) ಆಧಾರಿತ “ಡೀಪ್‌ಫೇಕ್” ವಿಡಿಯೋವನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕಾಂಗ್ರೆಸ್ ಪಕ್ಷಕ್ಕೆ ಪಾಟ್ನಾ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಬಜಂತ್ರಿ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಕಾಂಗ್ರೆಸ್‌ನ ಬಿಹಾರ ಘಟಕವು ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಎಐ-ರಚಿತ ವಿಡಿಯೋವೊಂದನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದಿವಂಗತ ತಾಯಿಯ ಬಗ್ಗೆ ಕನಸು ಕಾಣುತ್ತಿರುವಂತೆ ಚಿತ್ರಿಸಲಾಗಿತ್ತು. ಅದರಲ್ಲಿ ಅವರ ತಾಯಿಯು ಪ್ರತ್ಯಕ್ಷವಾಗಿ ಮೋದಿಯವರು ಮಾಡುತ್ತಿರುವ ರಾಜಕೀಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವಂತೆ ಚಿತ್ರಿಸಲಾಗಿತ್ತು.
ಈ ವಿಡಿಯೋ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿದ್ದಂತೆಯೇ, ಭಾರೀ ರಾಜಕೀಯ ವಿವಾದ ಆರಂಭವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಹಾಗೂ ಅವರ ತಾಯಿಯ ಘನತೆಗೆ ಧಕ್ಕೆ ತರಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ಕಾನೂನು ಕ್ರಮ ಮತ್ತು ಎಫ್‌ಐಆರ್
ಈ ಘಟನೆಯ ನಂತರ, ಪ್ರಧಾನಿ ಮೋದಿ ಮತ್ತು ಅವರ ತಾಯಿಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಬಿಜೆಪಿ ದೆಹಲಿ ಚುನಾವಣಾ ಘಟಕದ ಸಂಚಾಲಕ ಸಂಕೇತ್ ಗುಪ್ತಾ ಅವರು ನೀಡಿದ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 18(2), 336(3), 336(4), 340(2), 352, 356(2), ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಾಂಗ್ರೆಸ್‌ನ ಸಮರ್ಥನೆ
ಆದಾಗ್ಯೂ, ಕಾಂಗ್ರೆಸ್ ಪಕ್ಷವು ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದೆ. ವಿಡಿಯೋದಲ್ಲಿ ಪ್ರಧಾನಿಗಾಗಲೀ, ಅವರ ತಾಯಿಗಾಗಲೀ ಯಾವುದೇ ರೀತಿಯಲ್ಲೂ ಅಗೌರವ ತೋರಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿವಾದದ ನಂತರ, ವಿಡಿಯೋವನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಆಂತರಿಕ ತನಿಖೆ ನಡೆಸುವುದಾಗಿಯೂ ಬಿಹಾರ ಕಾಂಗ್ರೆಸ್ ಘಟಕ ಕಳೆದ ವಾರ ತಿಳಿಸಿತ್ತು.
ಈ ಹಿಂದೆ ಬಿಹಾರದ ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್-ಆರ್‌ಜೆಡಿ ‘ಮತದಾರ ಅಧಿಕಾರ ಯಾತ್ರೆ’ಯ ವೇದಿಕೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದ ವಿಡಿಯೋ ಕೂಡ ವೈರಲ್ ಆಗಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ಹೈಕೋರ್ಟ್ ಆದೇಶದಿಂದ, ಎಐ ತಂತ್ರಜ್ಞಾನದ ರಾಜಕೀಯ ದುರ್ಬಳಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.