ನವದೆಹಲಿ: ದೆಹಲಿಯ ವಿಧಾನಸಭೆಯಲ್ಲಿ ಸೋಮವಾರದಿಂದ ಮಹಿಳೆಯರ ದರ್ಬಾರ್ ಆರಂಭವಾಗಲಿದೆ. ಬಿಜೆಪಿಯ ಕಡೆಯಿಂದ ಇತ್ತೀಚೆಗಷ್ಟೇ ರೇಖಾ ಗುಪ್ತಾ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೆ, ಭಾನುವಾರ ಆಮ್ ಆದ್ಮಿ ಪಕ್ಷವು ತನ್ನ ಶಾಸಕಾಂಗ ನಾಯಕಿಯಾಗಿ ಮಾಜಿ ಮುಖ್ಯಮಂತ್ರಿ ಆತಿಷಿ ಮರ್ಲೇನಾರನ್ನು ಆಯ್ಕೆ ಮಾಡಿದೆ. ದೆಹಲಿ ವಿಧಾನಸಭೆಯಲ್ಲಿ ಆತಿಷಿ ಮರ್ಲೇನಾ ಅವರು ಪ್ರತಿಪಕ್ಷ ನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಸಿಎಂ ಮತ್ತು ವಿಪಕ್ಷ ನಾಯಕಿಯ ಪಟ್ಟಕ್ಕೇರಿದಂತಾಗಿದೆ.
ಸೋಮವಾರದಿಂದಲೇ ದೆಹಲಿಯಲ್ಲಿ 3 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಈ ಬಾರಿ ರೇಖಾ ಗುಪ್ತಾ ವರ್ಸಸ್ ಆತಿಷಿ ಮರ್ಲೇನಾ ಜಟಾಪಟಿಗೆ ಪ್ರಸಕ್ತ ಅಸೆಂಬ್ಲಿ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.
ಭಾನುವಾರ ನಡೆದ ಆಮ್ ಆದ್ಮಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಆತಿಷಿ ಮರ್ಲೇನಾ ಅವರನ್ನು ಪ್ರತಿಪಕ್ಷ ನಾಯಕಿಯಾಗಿ ಒಮ್ಮತದಿಂದ ಆರಿಸಲಾಗಿದೆ. ಈ ಸಭೆಯಲ್ಲಿ ಆಪ್‌ನ ಎಲ್ಲ ಶಾಸಕರು ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರೂ ಇದ್ದರು. ವಿಪಕ್ಷ ನಾಯಕಿಯ ಆಯ್ಕೆಯ ಬಳಿಕ ಆತಿಷಿಯವರಿಗೆ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆತಿಷಿ, ನನ್ನ ಮೇಲೆ ನಂಬಿಕೆಯಿಟ್ಟು ಇಷ್ಟು ದೊಡ್ಡ ಹುದ್ದೆ ಕೊಟ್ಟಿದ್ದಕ್ಕೆ ಪಕ್ಷದ ಸಂಚಾಲಕರಾದ ಅರಿವಂದ ಕೇಜ್ರಿವಾಲ್ ಹಾಗೂ ಎಲ್ಲ ಆಪ್ ಶಾಸಕರಿಗೂ ಧನ್ಯವಾದಗಳು. ರಚನಾತ್ಮಕ ಹಾಗೂ ಬಲಿಷ್ಠ ಪ್ರತಿಪಕ್ಷವಾಗಿ ನಾವು ಬಿಜೆಪಿ ನೀಡಿರುವ ಎಲ್ಲ ಭರವಸೆಗಳನ್ನೂ ಈಡೇರಿಸುವಂತೆ ಮಾಡುತ್ತೇವೆ ಎಂದಿದ್ದಾರೆ.
ಈ ಮೂಲಕ ಆಮ್ ಆದ್ಮಿ ಪಕ್ಷದ ಪ್ರಚಾರ ಸಭೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಆತಿಷಿ ಈಗ ಹೊಸ ಮತ್ತು ಬಲಿಷ್ಠ ಪಾತ್ರ ನಿರ್ವಹಿಸಲಿದ್ದಾರೆ. ಕೆಲವು ತಿಂಗಳ ಕಾಲ ದೆಹಲಿ ಸಿಎಂ ಆಗಿಯೂ ಕಾರ್ಯನಿರ್ವಹಿಸಿದ್ದ ಅವರು ಇನ್ನು ಮುಂದೆ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಮರ್ಥವಾಗಿ ಸವಾಲೊಡ್ಡಬೇಕಾಗಿದೆ. ಆಕ್ಸ್ ಫರ್ಡ್ ವಿವಿ ಪದವೀಧರೆಯಾಗಿರುವ ಆತಿಷಿ ಮರ್ಲೇನಾ, 2013ರಲ್ಲಿ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಕಣಕ್ಕಿಳಿದಾಗ ಪಕ್ಷದ ಪ್ರಣಾಳಿಕೆ ರಚನಾ ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಜಲ ಸತ್ಯಾಗ್ರಹದಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡ ಅವರು, ನಂತರದಲ್ಲಿ ಸಾವಯವ ಕೃಷಿ, ಪ್ರಗತಿಪರ ಶೈಕ್ಷಣಿಕ ವ್ಯವಸ್ಥೆ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದರು. 2015ರ ಜುಲೈನಿಂದ 2018ರ ಏಪ್ರಿಲ್‌ವರೆಗೆ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಪೂರ್ವ ದೆಹಲಿಯಲ್ಲಿ ಸ್ಪರ್ಧಿಸಿದ ಆತಿಷಿ, ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸೋಲನುಭವಿಸಿದರು. ಆದರೆ, 2020ರ ವಿಧಾನಸಭೆ ಚುನಾವಣೆಯಲ್ಲಿ ಆತಿಷಿಯ ರಾಜಕೀಯ ಜೀವನದಲ್ಲಿ ಹೊಸ ತಿರುವು ಮೂಡಿತು. ಕಲ್ಕಾಜಿ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದರು. 2023ರಲ್ಲಿ ದೆಹಲಿ ಸಂಪುಟಕ್ಕೆ ಸಚಿವೆಯಾಗಿ ಸೇರ್ಪಡೆಯಾದರು. ಶಿಕ್ಷಣ, ಪಿಡಬ್ಲ್ಯುಡಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವೆಯಾಗಿ ಕಾರ್ಯನಿರ್ವಹಿಸಿದರು.
ಕಳೆದ ವರ್ಷ ಸಿಎಂ ಸ್ಥಾಾನಕ್ಕೆ ಕೇಜ್ರಿವಾಲ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಳಿಕ, 2024ರ ಸೆಪ್ಟೆಂಬರ್ 17ರಂದು ಅವರು ನೂತನ ಮುಖ್ಯಮಂತ್ರಿಯಾಗಿ ಆತಿಷಿ ಮರ್ಲೇನಾರನ್ನು ಹೆಸರಿಸಿದರು. ಹೀಗಾಗಿ, ತಮ್ಮ 43ನೇ ವಯಸ್ಸಿನಲ್ಲಿ ಆತಿಷಿ ದೆಹಲಿಯ ಅತಿ ಕಿರಿಯ ಮುಖ್ಯಮಂತ್ರಿ ಹಾಗೂ 3ನೇ ಮಹಿಳಾ ಸಿಎಂ ಎಂಬ ಖ್ಯಾತಿಗೆ ಪಾತ್ರರಾದರು. ಈಗ ಅದೇ ಆತಿಷಿ ದೆಹಲಿ ವಿಧಾನಸಭೆಯಲ್ಲಿ ಮೊಟ್ಟಮೊದಲ ಮಹಿಳಾ ಪ್ರತಿಪಕ್ಷ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.