ಬೆಂಗಳೂರು : ಮಾರ್ಚ್ 8ರ ಭಾನುವಾರದಂದು ಅಹಮದಾಬಾದ್‌ನ ಐತಿಹಾಸಿಕ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಪ್ರಸ್ತುತ ಟೂರ್ನಿಯಲ್ಲಿ ನಿರಂತರವಾಗಿ ರನ್ ಗಳಿಸಲು ಪರದಾಡುತ್ತಿರುವ ಅಭಿಷೇಕ್ ಶರ್ಮಾ ಅವರನ್ನು ಅಂತಿಮ ಪಂದ್ಯದಿಂದ ಕೈಬಿಡಬೇಕು ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಕಳಪೆ ಫಾರ್ಮ್ ನಡುವೆಯೂ ಅಭಿಷೇಕ್ ಆಡಲಿ ಎಂದ ಅಶ್ವಿನ್
ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಅವರ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. 25 ವರ್ಷದ ಯುವ ಆಟಗಾರ ಈ ಟೂರ್ನಿಯಲ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದು, ಬರೋಬ್ಬರಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಪಿಚ್ ಅತ್ಯುತ್ತಮವಾಗಿದ್ದರೂ, ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಕಳಪೆ ಫಾರ್ಮ್‌ನಲ್ಲಿದ್ದರೂ ಅನಗತ್ಯ ಆಕ್ರಮಣಕಾರಿ ಹೊಡೆತಗಳಿಗೆ ಯತ್ನಿಸಿ ಅವರು ಪೆವಿಲಿಯನ್ ಸೇರಿದ್ದರು. ಹೀಗಿದ್ದರೂ, ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಬಾರದು ಎಂದು ರವಿಚಂದ್ರನ್ ಅಶ್ವಿನ್ ಬಲವಾಗಿ ಪ್ರತಿಪಾದಿಸಿದ್ದಾರೆ. ಇಂತಹ ಮಹತ್ವದ ಪಂದ್ಯಕ್ಕೂ ಮುನ್ನ ಯುವ ಆಟಗಾರನನ್ನು ಕೈಬಿಡುವುದು ತಪ್ಪು ನಿರ್ಧಾರವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪರಿಸ್ಥಿತಿಗೆ ತಕ್ಕಂತೆ ಆಡುವ ಅಗತ್ಯವಿದೆ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ ನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಶ್ವಿನ್, ಅಭಿಷೇಕ್ ಶರ್ಮಾ ಅವರಲ್ಲಿ ಪಂದ್ಯದ ಗತಿ ಬದಲಾಯಿಸುವ ಅದ್ಭುತ ಪ್ರತಿಭೆ ಇದೆ ಎಂದಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು ಮತ್ತು ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ಅವರಂತಹ ಪ್ರಮುಖ ಬೌಲರ್‌ಗಳ ವಿರುದ್ಧ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದರು ಎಂಬುದನ್ನು ಅಶ್ವಿನ್ ನೆನಪಿಸಿದ್ದಾರೆ. ಹೀಗಾಗಿ ಅಭಿಷೇಕ್ ಬಗ್ಗೆ ತಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಅವರೊಂದಿಗೆ ಒಂದು ಸಣ್ಣ ಮಾತುಕತೆ ನಡೆಸುವ ಅಗತ್ಯವಿದೆ. ಎದುರಾಳಿಗಳು ಅವರ ವಿರುದ್ಧ ನಿರ್ದಿಷ್ಟ ಯೋಜನೆಗಳನ್ನು ರೂಪಿಸುತ್ತಿದ್ದಾರೆ, ಹಾಗಾಗಿ ಬಲವಂತವಾಗಿ ಚೆಂಡನ್ನು ಬಲವಾಗಿ ಬಾರಿಸಲು ಪ್ರಯತ್ನಿಸಬಾರದು ಎಂದು ಸಲಹೆ ನೀಡಲು ಬಯಸುತ್ತೇನೆ ಎಂದು ಅಶ್ವಿನ್ ತಿಳಿಸಿದ್ದಾರೆ.
ಸ್ಪಿನ್ನರ್‌ಗಳ ವಿರುದ್ಧ ಎಚ್ಚರಿಕೆ ಹಾಗೂ ಜವಾಬ್ದಾರಿ ಅಗತ್ಯ
ಅಭಿಷೇಕ್ ಶರ್ಮಾ ಅವರ ಪ್ರತಿಭೆಯ ದೊಡ್ಡ ಅಭಿಮಾನಿ ನಾನಾಗಿದ್ದರೂ, ಅವರ ಬ್ಯಾಟಿಂಗ್ ಶೈಲಿಯಲ್ಲಿ ಕೆಲವೊಮ್ಮೆ ಪ್ರಬುದ್ಧತೆಯ ಕೊರತೆ ಕಾಣಿಸುತ್ತಿದೆ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಲ್ ಜಾಕ್ಸ್ ವಿರುದ್ಧ ಆಕ್ರಮಣಕಾರಿಯಾಗಿ ಆಡಲು ಹೋಗಿ ಅಭಿಷೇಕ್ ವಿಕೆಟ್ ಕಳೆದುಕೊಂಡಿದ್ದರು. ಇದೇ ಟೂರ್ನಿಯಲ್ಲಿ ಅವರು ಸ್ಪಿನ್ನರ್‌ಗಳ ವಿರುದ್ಧ ವಿಕೆಟ್ ಒಪ್ಪಿಸಿದ್ದು ಇದು ನಾಲ್ಕನೇ ಬಾರಿ. ಈ ಹಿಂದೆ ಸಲ್ಮಾನ್ ಅಲಿ ಅಗಾ, ಆರ್ಯನ್ ದತ್ ಮತ್ತು ಅಕೇಲ್ ಹೊಸೈನ್ ಕೂಡ ಅಭಿಷೇಕ್ ಅವರನ್ನು ಔಟ್ ಮಾಡಿದ್ದರು. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಅತ್ಯುತ್ತಮವಾಗಿ ಆಡುತ್ತಿರುವಾಗ, ಅಭಿಷೇಕ್ ಕೇವಲ ಸ್ಟ್ರೈಕ್ ರೊಟೇಟ್ ಮಾಡುವ ಮೂಲಕ ಇನ್ನಿಂಗ್ಸ್ ಕಟ್ಟುವತ್ತ ಗಮನಹರಿಸಬೇಕು. ಪ್ರತಿ ಚೆಂಡನ್ನೂ ಬೌಂಡರಿಗಟ್ಟುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ.
ನಾಯಕ, ಕೋಚ್ ಬೆಂಬಲದ ಅವಶ್ಯಕತೆ
ಸಹಜವಾಗಿಯೇ ಆಕ್ರಮಣಕಾರಿ ಶೈಲಿಯ ಆಟಗಾರನಾಗಿರುವ ಅಭಿಷೇಕ್ ಶರ್ಮಾ ಮೇಲೆ ಫೈನಲ್ ಪಂದ್ಯಕ್ಕೂ ಮುನ್ನ ಅನಗತ್ಯ ಒತ್ತಡ ಹೇರಬಾರದು ಎಂದು ಅಶ್ವಿನ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಸಲಹೆ ನೀಡಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರು ಯುವ ಆಟಗಾರನಿಗೆ ಆತ್ಮವಿಶ್ವಾಸ ತುಂಬಬೇಕು. ಆತನ ಮೇಲೆ ಹೆಚ್ಚು ಒತ್ತಡ ಹೇರಿದರೆ, ಚೆಂಡನ್ನು ಇನ್ನಷ್ಟು ಜೋರಾಗಿ ಬಾರಿಸಲು ಹೋಗಿ ತಪ್ಪು ಮಾಡುವ ಸಾಧ್ಯತೆಯಿದೆ. ಅಭಿಷೇಕ್ ಒಬ್ಬ ಅದ್ಭುತ ಟೈಮಿಂಗ್ ಆಟಗಾರನಾಗಿದ್ದು, ಆತನನ್ನು ಮಾನಸಿಕವಾಗಿ ಮುಕ್ತವಾದ ಹಾಗೂ ಉತ್ತಮ ಸ್ಥಿತಿಯಲ್ಲಿಡುವ ಅಗತ್ಯವಿದೆ. ಒಂದು ವೇಳೆ ನಾನು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿದ್ದರೆ ಖಂಡಿತವಾಗಿಯೂ ಫೈನಲ್ ಪಂದ್ಯದಲ್ಲಿ ಅವರನ್ನೇ ಕಣಕ್ಕಿಳಿಸುತ್ತಿದ್ದೆ ಎಂದು ರವಿಚಂದ್ರನ್ ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಗೂಗಲ್ CEO ಸುಂದರ್ ಪಿಚೈ ವೇತನದಲ್ಲಿ ಬಂಪರ್ ಏರಿಕೆ!



















