ನವದೆಹಲಿ: ಖ್ಯಾತ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಅವರು 1937ರ ಡಿಸೆಂಬರ್ 28ರಂದು ಈಗಿನ ಮುಂಬಯಿನಲ್ಲಿ ಜನಿಸಿದ್ದರು. ಆದರೆ, ತಂದೆ -ತಾಯಿ ಇದ್ದರು ಕೂಡ ಅನಾಥಾಶ್ರಮದಲ್ಲಿ ಬೆಳೆದಿದ್ದ ಅವರ ಸಾಧನೆ ಮಾತ್ರ ಇಡೀ ದೇಶಕ್ಕೆ ಮಾದರಿಯೇ ಸರಿ.
ತಂದೆ, ನಾವಲ್ ಟಾಟಾ ಹಾಗೂ ತಾಯಿ ಸೂನಿ ಟಾಟಾ. ರತನ್ ಟಾಟಾ ಅವರು 10 ವರ್ಷ ವಯಸ್ಸಿನವರಾಗಿದ್ದಾಗ ತಂದೆ – ತಾಯಿ ವಿಚ್ಛೇದನ ಪಡೆದು ದೂರಾಗಿದ್ದರು. ಹೀಗಾಗಿ ತಂದೆ- ತಾಯಿ ಅವರನ್ನು ಟಾಟಾ ಫ್ಯಾಮಿಲಿಯದ್ದೇ ಆಗಿದ್ದ ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು.
ಆಗ ರತನ್ ಟಾಟಾ ಅವರ ಅಜ್ಜಿ, ನವಾಜ್ ಬಾಯಿ ಟಾಟಾ ಅವರು ರತನ್ ಟಾಟಾ ಅವರನ್ನು ಕಾನೂನಾತ್ಮಕವಾಗಿ ದತ್ತು ಪಡೆದರು. ಅಷ್ಟರಲ್ಲಾಗಲೇ ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಅವರು ಬೇರೊಂದು ಮದುವೆಯಾಗಿದ್ದರು. ಅವರಿಗೆ ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಹೀಗಾಗಿ ಅನಾಥಾಲಯದಿಂದ ತನ್ನ ತಂದೆ, ತಾತ ಇದ್ದ ಮನೆಗೆ ಹಿಂದಿರುಗಿದ ರತನ್ ಟಾಟಾ, ಅಲ್ಲಿ ತಮ್ಮ ಮಲಸಹೋದರ ನೋಯೆಲ್ ಟಾಟಾ (ರತನ್ ಟಾಟಾ ಅವರ ಮಲತಾಯಿ ಮಗ) ಅವರೊಂದಿಗೆ ಬೆಳೆಯಲು ಆರಂಭಿಸಿದರು.
1991ರಲ್ಲಿ ಅವರು ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. 1963ರಲ್ಲೇ ಅವರು ಟಾಟಾ ಸಮೂಹ ಸಂಸ್ಥೆಗಳ ನಾನಾ ಕಂಪನಿಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಾಗಿ ಆ ಸಂಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆನಂತರ ಸಮೂಹ ಸಂಸ್ಥೆಗಳ ಚುಕ್ಕಾಣಿ ಹಿಡಿದರು. 1991ರಲ್ಲಿ ಅಲ್ಲಿಯವರೆಗೆ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ಜೆಆರ್ ಡಿ ಟಾಟಾ ಅವರು ಅಧಿಕಾರದಿಂದ ಕೆಳಗಿಳಿದ ಮೇಲೆ ಇವರೇ ಆ ಸ್ಥಾನಕ್ಕೆ ಏರಿದರು.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅಲ್ಲಿ ಹೆಚ್ಚು ಯೋಗದಾನ ನೀಡಿದ್ದಾರೆ. ಭಾರತದ ಗ್ರಾಮಾಂತರ ಭಾಗದಲ್ಲಿ ನೀರು ಹರಿಸುವ ದೊಡ್ಡ ಕನಸಿನ ಯೋಜನೆಯೊಂದಕ್ಕೆ ಅವರು ನ್ಯೂ ಸೌತ್ ವೇಲ್ಸ್ ನ ಇಂಜಿನಿಯರ್ ಗಳನ್ನು ಬಳಸಿಕೊಂಡು ಜನ ಸೇವೆ ಮಾಡಿದ್ದಾರೆ.