ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬೈಂದೂರು ತಾಲೂಕಿನ ರಾಘವೇಂದ್ರ (35) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 15 ವರ್ಷ ಪ್ರಾಯದ ಬಾಲಕಿಯ ಸಂಬಂಧಿಯಾಗಿರುವ ಆರೋಪಿ, ಆಕೆಯನ್ನು ಮನೆ ಸಮೀಪದ ಹಾಡಿಗೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲತ್ಕಾರ ಮಾಡಿದ್ದನು. ಈ ವಿಷಯ ತಂದೆ ತಾಯಿಗೆ ತಿಳಿಸಿದಲ್ಲಿ ಜೀವಕ್ಕೆ ತೊಂದರೆ ಮಾಡುವುದಾಗಿ ಬೆದರಿಕೆಯೊಡ್ಡಿ ನಿರಂತರ ದೌರ್ಜನ್ಯ ಎಸಗಿದ್ದನು.
2024ರ ಆಗಸ್ಟ್ ತಿಂಗಳಲ್ಲಿ ನೊಂದ ಬಾಲಕಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂತು. ಆ ಮೂಲಕ ಪ್ರಕರಣ ಬೆಳಕಿಗೆ ಬಂತು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಆಗಿನ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯ ಒಟ್ಟು 27 ಸಾಕ್ಷಿಗಳ ಪೈಕಿ 12 ಸಾಕ್ಷಿಗಳ ವಿಚಾರಣೆಗಳು ನಡೆಸಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಡಿಎನ್ಎ ವರದಿ ಆಧರಿಸಿ ಆರೋಪಿ ತಪ್ಪಿತಸ್ಥ ಎಂದು ಮನಗಂಡು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ 20 ವರ್ಷಗಳ ಕಾಲ ಕಠಿನ ಜೈಲುಶಿಕ್ಷೆ ಮತ್ತು 25,000 ರೂ. ದಂಡ ಮತ್ತು ಸರಕಾರದ ಪರವಾಗಿ ನೊಂದ ಬಾಲಕಿಗೆ 3 ಲ.ರೂ. ಪರಿಹಾರ ನೀಡುವಂತೆ ಆದೇಶ ನೀಡಿದರು.