ಪ್ಯಾರಿಸ್/ನವದೆಹಲಿ: ಜಾಗತಿಕ ಫ್ಯಾಷನ್ ದೈತ್ಯ ‘ರಾಲ್ಫ್ ಲಾರೆನ್‘ (Ralph Lauren) ತನ್ನ ಇತ್ತೀಚಿನ ಪ್ಯಾರಿಸ್ ಫ್ಯಾಷನ್ ವೀಕ್ ಪ್ರದರ್ಶನದಲ್ಲಿ ಭಾರತೀಯ ಸಂಪ್ರದಾಯದ ಅವಿಭಾಜ್ಯ ಅಂಗವಾದ ‘ಜುಮ್ಕಾ’ಗಳನ್ನು (Jhumkas) ಪ್ರದರ್ಶಿಸಿದೆ. ಆದರೆ, ಈ ವಿನ್ಯಾಸದ ಮೂಲ ಭಾರತ ಎಂದು ಎಲ್ಲೂ ಉಲ್ಲೇಖಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ‘ಸಾಂಸ್ಕೃತಿಕ ಹರಣ’ದ ಕುರಿತು ದೊಡ್ಡ ಚರ್ಚೆ ಆರಂಭವಾಗಿದೆ.

ಭಾರತೀಯ ಜುಮ್ಕಾಗಳಿಗೆ ವಿದೇಶಿ ಬಣ
ರಾಲ್ಫ್ ಲಾರೆನ್ ಅವರ 2026ರ ಫಾಲ್ ಕಲೆಕ್ಷನ್ ಪ್ರದರ್ಶನದ ವೇಳೆ ಮಾಡೆಲ್‌ಗಳು ದೊಡ್ಡ ಗಾತ್ರದ ಮತ್ತು ಆಕರ್ಷಕವಾದ ಜುಮ್ಕಾಗಳನ್ನು ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಆಕ್ಸಿಡೈಸ್ಡ್ ಮೆಟಲ್‌ನಿಂದ ಹಿಡಿದು ಮಣಿಗಳುಳ್ಳ ಉದ್ದದ ಕಿವಿಯೋಲೆಯವರೆಗೆ ಎಲ್ಲವೂ ದೆಹಲಿಯ ಜನ್‌ಪಥ್ ಅಥವಾ ಭಾರತದ ಯಾವುದೇ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಸಾಂಪ್ರದಾಯಿಕ ಕಿವಿಯೋಲೆಗಳನ್ನೇ ಹೋಲುತ್ತಿದ್ದವು. ಆದರೆ, ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಇವುಗಳನ್ನು “ಅಪ್ಪಟ ವಿಂಟೇಜ್ ಅಕ್ಸೆಸರೀಸ್” (Authentic Vintage Accessories) ಎಂದು ಕರೆದಿದೆಯೇ ಹೊರತು ಭಾರತದ ಕುರಿತು ಒಂದು ಶಬ್ದವನ್ನೂ ಬಳಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಭಾರತೀಯರ ಆಕ್ರೋಶ
ರಾಲ್ಫ್ ಲಾರೆನ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. “ನಮ್ಮ ಸಂಸ್ಕೃತಿ ಮತ್ತು ಫ್ಯಾಷನ್ ಅನ್ನು ಇಷ್ಟ ಬಂದಂತೆ ಬಳಸಿಕೊಳ್ಳುವ ಜಾಗತಿಕ ಬ್ರ್ಯಾಂಡ್‌ಗಳು, ನಮಗೆ ಸಲ್ಲಬೇಕಾದ ಗೌರವ ಅಥವಾ ಕ್ರೆಡಿಟ್ ನೀಡಲು ಮಾತ್ರ ಹಿಂದೆ ಸರಿಯುತ್ತವೆ” ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. “ವಿದೇಶಿಯರು ಭಾರತದ ಸಾಂಸ್ಕೃತಿಕ ಸೊತ್ತನ್ನು ಕಸಿದುಕೊಂಡು ಅದನ್ನು ‘ವೈಟ್‌ವಾಶ್’ ಮಾಡುತ್ತಿದ್ದಾರೆ” ಎಂದು ಹಲವರು ಟೀಕಿಸಿದ್ದಾರೆ. “ದೆಹಲಿಯ ಜನ್‌ಪಥ್ ಸ್ಟೈಲ್ ಈಗ ಪ್ಯಾರಿಸ್‌ಗೆ ತಲುಪಿದೆ, ಆದರೆ ಅಲ್ಲಿನ ಕ್ರೆಡಿಟ್ ಮಾತ್ರ ಮಿಸ್ ಆಗಿದೆ” ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಈ ಹಿಂದಿನ ವಿವಾದಗಳು
ಕೇವಲ ರಾಲ್ಫ್ ಲಾರೆನ್ ಮಾತ್ರವಲ್ಲದೆ, ಈ ಹಿಂದೆ ‘ಪ್ರಾಡಾ’ ಕಂಪನಿಯು ಕೊಲ್ಹಾಪುರಿ ಚಪ್ಪಲಿಗಳನ್ನು ಹಾಗೂ ‘ಡಿಯೋರ್’ ಸಂಸ್ಥೆಯು ಮುಕೇಶ್ ಕೋಟ್ ಅನ್ನು ಪರಿಚಯಿಸಿದಾಗಲೂ ಇಂತಹುದೇ ವಿವಾದಗಳು ಎದ್ದಿದ್ದವು. ಸೋಫಿ ಬುಹೈ ಎಂಬ ಬ್ರ್ಯಾಂಡ್ ಕೂಡ ಭಾರತೀಯ ಕಲಾತ್ಮಕತೆಯಿಂದ ಪ್ರೇರಿತವಾದ ಬೆಳ್ಳಿಯ ಕಿವಿಯೋಲೆಗಳನ್ನು ಸುಮಾರು 63,000 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಆದರೆ, ಈ ಬ್ರ್ಯಾಂಡ್‌ಗಳು ಭಾರತದ ಕುರಿತು ಉಲ್ಲೇಖ ಮಾಡದಿರುವುದು ಭಾರತೀಯ ಕುಶಲಕರ್ಮಿಗಳಿಗೆ ಮಾಡುತ್ತಿರುವ ಅವಮಾನ ಎಂದು ಫ್ಯಾಷನ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಹಿಮಬೆಟ್ಟದ ಮೇಲೆ ‘ಸೀರೆ’ ಸಂಭ್ರಮ : ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಸ್ನೋಬೋರ್ಡಿಂಗ್ ಮಾಡಿ ಮನಗೆದ್ದ ಯುವತಿಯರು



















